ಧರ್ಮ, ಸಂಸ್ಕೃತಿ ಶಿಕ್ಷಣ: ರಾಘವೇಶ್ವರಶ್ರೀ
ಮಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ, ಸಂಸ್ಕೃತಿಯ ಶಿಕ್ಷಣದಿಂದ ಸಮಾಜಕ್ಕೆ ಆರೋಗ್ಯವಂತ ಯುವಕರನ್ನು ನೀಡಬೇಕು ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ನಂತೂರಿನಲ್ಲಿ ಶ್ರೀಭಾರತೀ ಪದವಿಪೂರ್ವ ಕಾಲೇಜು ಮತ್ತು ಸದಾನಂದ ಸರಸ್ವತಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ದಶಮಾನೋತ್ಸವ ಸಮಾರಂಭದಲ್ಲಿ ಭಾನುವಾರ ಅವರು ಆಶೀರ್ವಚನ ನೀಡಿದರು. ಶಂಕರಾಚಾರ್ಯರು ಹಿಂದೆ ದೇಶದ ಉದ್ದಗಲಕ್ಕೆ ಸಂಚರಿಸಿ ಸಮಾಜಿಕ ಕ್ರಾಂತಿಗಾಗಿ ಮಠಗಳನ್ನು ಸ್ಥಾಪಿಸಿದರು. ಭಾರತೀ ವಿದ್ಯಾಲಯವೂ ಇದೇ ಉದ್ದೇಶದಿಂದ ಶಿಕ್ಷಣ ನೀಡುತ್ತಿದೆ. ಇಂದಿನ ದಿನಗಳಲ್ಲಿ ವಿದ್ಯಾಕ್ಷೇತ್ರದಲ್ಲಿ ಜೇನಿನ ಜತೆ ವಿಷ ಬೆರೆಸುವ ಕೆಲಸ ನಡೆಯುತ್ತಿದ್ದು, ಜೇನಿನ ಜತೆ ಔಷಧವನ್ನು ನೀಡುವ ಕಾರ್ಯ ನಡೆಯಬೇಕು ಎಂದರು. ಇದೇ ಸಂದರ್ಭ ದಶಮಾನೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ, ನಿಟ್ಟೆ ಕೆ.ಎಸ್.ಹೆಗ್ಡೆ ಶಿಕ್ಷಣ ಸಂಸ್ಥೆ ಕುಲಪತಿ ಡಾ.ವಿನಯ ಹೆಗ್ಡೆ, ಮಂಗಳೂರು ವಿವಿ ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್, ಪಾಲಿಕೆ ಸದಸ್ಯೆ ರೂಪ ಬಂಗೇರ, ವಿದ್ಯಾ ಸಂಸ್ಥೆ ಅಧ್ಯಕ್ಷ ಕೆ.ಎಸ್.ಭಟ್, ಕಾರ್ಯದರ್ಶಿ ವೈ.ವಿ.ಭಟ್, ಪ್ರಾಂಶುಪಾಲ ಡಾ.ಜಿ.ಎನ್.ಭಟ್, ಪಿ.ಯು.ಕಾಲೇಜು ಪ್ರಾಂಶುಪಾಲೆ ಶಾರದಾ ಮಣಿ ಹಾಜರಿದ್ದರು.
ನಾಳೆ ವಿದ್ಯುತ್ ನಿಲುಗಡೆ
ಮಂಗಳೂರು: 33 ಕೆವಿ ಪಣಂಬೂರು ಲೈನ್ನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಪಣಂಬೂರು ವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್ಗಳಲ್ಲಿ ಜ.22ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ವಿದ್ಯುತ್ ನಿಲುಗಡೆ ಪ್ರದೇಶ-ಬೆಂಗ್ರೆ, ತೋಟ ಬೆಂಗ್ರೆ, ತಣ್ಣೀರುಬಾವಿ, ಕಸಬ ಬೆಂಗ್ರೆ, ಕೋಡಿಕಲ್, ಕೂಳೂರು, ಬಂಗ್ರಕೂಳೂರು, ಕೊಟ್ಟಾರ, ಕುಂಟಿಕಾನ ಹಾಗೂ ಸುತ್ತಲಿನ ಪ್ರದೇಶ.