ಸತ್ಯ, ಧರ್ಮಕ್ಕಾಗಿ ನ್ಯಾಯ: ರಾಘವೇಶ್ವರ ಶ್ರೀ
ಪುತ್ತೂರು: ನ್ಯಾಯವಾದಿಗಳು ನುಡಿಯುವ ಮಾತುಗಳು ಸಮಾಜದ ಮೇಲೆ ನೇರ ಪ್ರಭಾವ ಬೀರುತ್ತವೆ. ಈ ಹಿನ್ನೆಲೆಯಲ್ಲಿ ಕಾನೂನು ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಮಾತುಗಳನ್ನು ಕೇವಲ ಹಣ ಮಾಡುವುದಕ್ಕಾಗಿ ಮಾತ್ರ ಬಳಸಿಕೊಳ್ಳದೆ ಸತ್ಯ, ಧರ್ಮಕ್ಕಾಗಿ ಉಪಯೋಗಿಸಿಕೊಳ್ಳಬೇಕು ಎಂದು ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.
ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಕಾಲೇಜಿನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ, ನೂತನವಾಗಿ ನಿರ್ಮಾಣವಾಗಲಿರುವ ಗ್ರಂಥಾಲಯ ಕಟ್ಟಡದ ಶಿಲಾನ್ಯಾಸ ಮತ್ತು ಕಂಪ್ಯೂಟರ್ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ರಜತ ಮಹೋತ್ಸವ ಸಮಿತಿ ಗೌರವ ಅಧ್ಯಕ್ಷ ಕೆ. ರಾಮ ಭಟ್ ಅಧ್ಯಕ್ಷತೆ ವಹಿಸಿ, ದೇಶದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವು ವ್ಯಕ್ತಿಗತವಾಗಿ ಮಾರಾಟವಾಗುತ್ತಿದೆ. ಜಾತ್ರೆಗಳಲ್ಲಿ ಜಾನುವಾರುಗಳನ್ನು ಖರೀದಿಸುವಂತೆ ಪಾರ್ಲಿಮೆಂಟ್‌ನಲ್ಲಿ ಸದಸ್ಯರ ಖರೀದಿ ನಡೆಯುತ್ತಿದೆ. ಇದೊಂದು ವಿನಾಶದ ಮುನ್ಸೂಚನೆಯಾಗಿದೆ ಎಂದರು.
ರಾಷ್ಟ್ರ ಚಿಂತನೆ ಇರಲಿ: ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕಾನೂನು ಕಾಲೇಜುಗಳಲ್ಲಿ ರಾಷ್ಟ್ರ ಚಿಂತನೆಯ ಶಿಕ್ಷಣ ನೀಡುವ ಕೆಲಸವಾಗಬೇಕು ಎಂದರು. ಕಾಲೇಜಿನ ಅಭಿವೃದ್ಧಿ ಕಾರ್ಯಗಳಿಗೆ ತನ್ನ ನಿಧಿಯಿಂದ ರು. 10 ಲಕ್ಷ ನೀಡುವುದಾಗಿ ಅವರು ಘೋಷಿಸಿದರು.
ಶಾಸಕಿ ಮಲ್ಲಿಕಾ ಪ್ರಸಾದ್, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಮಂಗಳಾ ಶ್ರೀಧರ್ ಶುಭ ಹಾರೈಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ಶಿವಪ್ರಸಾದ್, ಕಾನೂನು ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಕೆ.ಆರ್. ಅಚಾರ್ಯ, ಸಂಚಾಲಕ ಸಂತೋಷ್, ಖಜಾಂಚಿ ಗಣೇಶ್ ಜೋಷಿ, ಸದಸ್ಯ ನವೀನ್‌ಚಂದ್ರ ನಾಯ್ಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನರಸಿಂಹ ಪ್ರಸಾದ್, ಕಾರ್ಯದರ್ಶಿ ಗಿರೀಶ್ ಮಳಿ ಇದ್ದರು.
ಸನ್ಮಾನ: ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷ ಕೆ. ರಾಮ ಭಟ್, ಕಾನೂನು ಕಾಲೇಜಿನ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ರಾಮಚಂದ್ರ ಭಟ್ ಪಂಜಿಗುಡ್ಡೆ, ಸುಬ್ರಹ್ಮಣ್ಯ ಕೊಳತ್ತಾಯ, ನಿವೃತ್ತ ಪ್ರಾಂಶುಪಾಲ ಬಿ. ಜನಾರ್ದನ ಭಟ್, ಸೇಡಿಯಾಪು ಜನಾರ್ದನ ಭಟ್, ಅಚ್ಚುತ ಪ್ರಭು, ವಿದ್ಯಾಶಂಕರ್, ಉದಯಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ.ಆರ್. ರಂಗಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಕಾರ್ಯದರ್ಶಿ ರವಿಚಂದ್ರ ವಂದಿಸಿದರು. ಸುಬ್ರಹ್ಮಣ್ಯ ಕುಮಾರ್ ಅಗರ್ತ ಮತ್ತು ಮುರಳೀಕೃಷ್ಣ ಚಳ್ಳಂಗಳ ನಿರೂಪಿಸಿದರು.
ರಾಷ್ಟ್ರೀಯ ವಿಚಾರ ಸಂಕಿರಣ: ಬೆಳ್ಳಿ ಹಬ್ಬದ ಸಂದರ್ಭ ನಡೆದ ವಿಚಾರಣ ಸಂಕಿರಣವನ್ನು ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್, ನಿವೃತ್ತ ನೌಕಾಧಿಕಾರಿ ಪಿ.ಜಿ. ಭಟ್ ಮತ್ತಿತರರು ಇದ್ದರು. ವಿಚಾರ ಸಂಕಿರಣದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಪಿ.ಎಲ್. ಧರ್ಮ, ಐಐಎಂ ಬೆಂಗಳೂರಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಪಬ್ಬಿ ಶೆಟ್ಟಿ, ಕಾರ್ಕಳದ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ವಿಷಯ ಮಂಡಿಸಿದರು. ವಿವಿಧ ಕಾಲೇಜುಗಳ 220 ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
---