ದಕ್ಷಿಣ ಭಾರತದಾದ್ಯಂತ ಜನಜಾಗೃತಿ ಸಪ್ತಾಹ
ದಾವಣಗೆರೆ: ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಹಾಗೂ ಶಿಕ್ಷಣ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟ ಸಾಮಾಜಿಕ ಪರಿವರ್ತನಾ ಜನಾಂದೋಲನ ಜ.21ರಿಂದ ದಕ್ಷಿಣ ಭಾರತದಲ್ಲಿ ಏಕಕಾಲಕ್ಕೆ ಜನಜಾಗೃತಿ ಸಪ್ತಾಹ ಹಮ್ಮಿಕೊಂಡಿದೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕಿ ಹಸೀನಾ, ದಕ್ಷಿಣ ಭಾರತದ ಜನಪರ ಸಂಘ- ಸಂಸ್ಥೆಗಳ ಒಕ್ಕೂಟ ಕರ್ನಾಟಕ ಸಾಮಾಜಿಕ ಪರಿವರ್ತನಾ ಜನಾಂದೋಲನ, ಆಂಧ್ರದ ಪೀಪಲ್ ವಾಯ್ಸ್ ಫಾರ್ ಚೈಲ್ಡ್ ರೈಟ್ಸ್, ತಮಿಳುನಾಡು ಸಮಕಳ್ವಿ ಇಯಕ್ಕಮ್ ಮತ್ತು ಕೇರಳದ ಜನಮುನ್ನೆಟ್ಟಮ್ ನೇತೃತ್ವದಲ್ಲಿ ಏಕಕಾಲದಲ್ಲಿ ದಕ್ಷಿಣ ಭಾರತದಲ್ಲಿ ಜನಜಾಗೃತಿ ಸಪ್ತಾಹ ಆರಂಭಿಸಲಿದೆ ಎಂದರು.
ಸಂವಾದ: ಸಪ್ತಾಹದ ಅಂಗವಾಗಿ ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಗುಲ್ಬರ್ಗಾ, ವಿಜಾಪುರ, ಬೆಳಗಾವಿ, ಬೆಂಗಳೂರು ಜಿಲ್ಲೆಗಳಲ್ಲಿ ಜ.21ರಿಂದ 30ರವರೆಗೆ ಸಿಎಂಗೆ ಮಕ್ಕಳೇ ಪತ್ರ ಬರೆದು, ಶಾಲೆ ಮುಚ್ಚದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಿದ್ದಾರೆ. ಜ.25ರಂದು ಸರ್ಕಾರಿ ಶಾಲೆ ಮುಚ್ಚುವುದರಿಂದ ಶೋಷಿತ ಸಮುದಾಯದ ಮಕ್ಕಳ ಶಿಕ್ಷಣದ ಮೇಲಾಗುವಂತಹ ದುಷ್ಪರಿಣಾಮ ಕುರಿತ ಸಂವಾದ ನಡೆಯಲಿದೆ ಎಂದು ಅವರು ತಿಳಿಸಿದರು.
ಜ.26ರಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಅರ್ಪಿಸಲಾಗುವುದು. ಜ.30ರಂದು ರಾಜ್ಯ ಮಟ್ಟದಲ್ಲಿ ಮಕ್ಕಳು ಪತ್ರಿಕಾಗೋಷ್ಠಿ ನಡೆಸಿ, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು, ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಮನವಿ ಅರ್ಪಿಸುವರು. ಆಗರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ದಕ್ಷಿಣ ಭಾರತಾದ್ಯಂತ ತೀವ್ರ ಸ್ವರೂಪದ ಹೋರಾಟಗಳನ್ನು ಸಂಘಟನೆ ಒಕ್ಕೂಟದ ನೇತೃತ್ವದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.