ವಾಸುದೇವ ಅಡಿಗ ಕೊಲೆಗೆ ಆಸ್ತಿ ವಿವಾದ ಕಾರಣ
ಉಡುಪಿ: ಆರ್.ಟಿ.ಐ. ಕಾರ್ಯಕರ್ತ, ಕುಂದಾಪುರದ ವಂಡಾರು ಗ್ರಾಮದ ವಾಸುದೇವ ಅಡಿಗ ತಾವು ನಡೆಸುತ್ತಿದ್ದ ಆರ್.ಟಿ.ಐ. ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಕೊಲೆಯಾಗಿಲ್ಲ, ಅವರು ತಮ್ಮ ನೆರೆಮನೆಯ ರಮೇಶ್ ಬಾಯರಿ ಎಂಬವರೊಂದಿಗೆ ಹೊಂದಿದ್ದ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕೊಲೆಯಾಗಿದ್ದಾರೆಂಬ ಬಗ್ಗೆ ಪೊಲೀಸರಿಗೆ ಖಚಿತ ಪುರಾವೆಗಳು ಸಿಕ್ಕಿವೆ.
ಸ್ವಯಂಘೋಷಿತ ಮಂತ್ರವಾದಿ ರಮೇಶ್ ಬಾಯರಿ ಅವರ ಬೆಂಗಳೂರಿನ 6 ಶಿಷ್ಯರು ಜ. 7ರಂದು ಅಡಿಗರನ್ನು ಕೊಲೆಯನ್ನು ಮಾಡಿ, ಶವವನ್ನು ಚಿಕ್ಕಮಗಳೂರಿನ ಕಡೂರು ತಾಲೂಕಿನ ಎಮ್ಮೆದೊಡ್ಡಿಯ ಮದಗದಕೆರೆಗೆ ಎಸೆದಿದ್ದರು. ಈ ಕೊಲೆಗೆ ಹಣಕಾಸಿನ ಸಹಾಯ ಮಾಡಿರುವ ಬಾಯರಿ ಅವರ ಭಾವ ಸುಬ್ರಹ್ಮಣ್ಯ ಉಡುಪ ಮತ್ತು ಕೊಲೆ ಮಾಡಿದ 5 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೂತ್ರದಾರ ಬಾಯರಿ ಮತ್ತು ಇನ್ನೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾರೆ.
'ನಮ್ಮ ಗುರುಗಳಾದ ರಮೇಶ್ ಬಾಯರಿ ಅವರಿಗೆ ನೆರೆಮನೆಯ ವಾಸುದೇವ ಅಡಿಗ ಆಸ್ತಿಯ ವಿಷಯದಲ್ಲಿ ತೊಂದರೆ ಕೊಡುತ್ತಿದ್ದ, ನಮ್ಮ ಗುರುಗಳು ಪಡುತ್ತಿದ್ದ ನೋವನ್ನು ನೋಡಲಾಗದೇ ನಾವು ಅಡಿಗನನ್ನು ಕೊಲೆ ಮಾಡಿದ್ದೇವೆ' ಎಂದು ಕೊಲೆ ಆರೋಪಿಗಳು ಹೇಳಿದ್ದಾರೆ ಎಂದು ಉಡುಪಿ ಎಸ್ಪಿ ಡಾ. ಬೋರಲಿಂಗಯ್ಯ ಎಂ. ಬಿ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಡಿಗ ಅವರು ಮಾಹಿತಿ ಹಕ್ಕು ಕಾಯ್ದೆ (ಆರ್.ಟಿ.ಐ.)ಯಡಿ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಧರ್ಮದರ್ಶಿಗಳು, ಕಲ್ಲುಕೋರೆಗಳ ಮಾಲೀಕರ ವಿರುದ್ಧ ಹೋರಾಟ ನಡೆಸುತ್ತಿದ್ದರು. ಅವರು ಆರ್.ಟಿ.ಐ. ಹೋರಾಟಕ್ಕೆ ಒಳಗಾದ ಸುಮಾರು 30ಕ್ಕೂ ಅಧಿಕ ಮಂದಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗಿದೆ. ನೆರೆಮನೆಯ ರಮೇಶ್ ಬಾಯರಿ ಅವರನ್ನು ಕೂಡ ಕೊಲೆಯ ಮರುದಿನ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದೇವೆ, ಆದರೆ ಸರಿಯಾದ ಸಾಕ್ಷಿಗಳಿಲ್ಲದೇ ಬಿಟ್ಟು ಬಿಡಲಾಗಿತ್ತು ಎಂದು ಎಸ್ಪಿ ಹೇಳಿದ್ದಾರೆ.
ಆದರೆ ಆರೋಪಿಗಳು ಬಳಸಿದ್ದ ವಾಹನದ ಜಾಡನ್ನು ಹಿಡಿದು, ಯಶಸ್ವಿಯಾಗಿ ಪ್ರಕರಣವನ್ನು ಬಗೆಹರಿಸಲಾಗಿದೆ. ಈ ಪ್ರಕರಣವನ್ನು ಬಯಲಿಗೆಳೆಯಲು ಬಂಟ್ವಾಳ ಗ್ರಾಮಾಂತರ ಠಾಣೆ ಮಹೇಶ ಪ್ರಸಾದ್ ಅವರನ್ನು ವಿಶೇಷಾಧಿಕಾರಿಯಾಗಿ ನೇಮಿಸಲಾಗಿತ್ತು. ಈ ಕೊಲೆ ವೈಯುಕ್ತಿಕ ಆಸ್ತಿ ವಿವಾದದಿಂದ ನಡೆದಿದೆ ಎನ್ನುವುದು ಖಚಿತವಾಗಿದ್ದರೂ, ಅಡಿಗರ ಆರ್.ಟಿ.ಐ. ಹೋರಾಟದ ಹಿನ್ನೆಲೆಯ ತನಿಖೆಯನ್ನು ಕೈಬಿಟ್ಟಿಲ್ಲ, ಅದು ಕೂಡ ಮುಂದುವರಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕುಂದಾಪುರ ಡಿವೈಎಸ್ಪಿ ಯಶೋಧ ಶಿಬರೂರ, ಬಂಟ್ವಾಳದ ಮಹೇಶ್ ಪ್ರಸಾದ್, ವೃತ್ತ ನಿರೀಕ್ಷಕರಾದ ಮಂಜುನಾಥ ಕವರಿ, ಮಾರುತಿ ಜಿ. ನಾಯಕ್, ಅಪರಾಧ ಪತ್ತೆದಳ ನಿರೀಕ್ಷಕ ಪ್ರವೀಣ್ ನಾಯಕ್, ಉಪನಿರೀಕ್ಷಕರಾದ ಸಂಪತ್ ಕುಮಾರ್, ದೇಜಪ್ಪ, ಅರುಣ್ ನಾಯಕ್ ಮುಂತಾದವರಿದ್ದರು.
ಪೊಲೀಸರ ಈ ಕಾರ್ಯಾಚರಣೆಯ ಯಶಸ್ಸಿನ ಹಿಂದೆ ಒಬ್ಬ ಪ್ರಜ್ಞಾವಂತ ನಾಗರಿಕನಿದ್ದಾನೆ.
ಆರೋಪಿಗಳಲ್ಲಿ ಒಬ್ಬನಾದ ಬೆಂಗಳೂರಿನ ಉಮೇಶ್ ಎಂಬಾತ ತನ್ನ 2 ಮಂದಿ ಸಹಚರರೊಂದಿಗೆ ಆಗಾಗ್ಗೆ ವಂಡಾರಿಗೆ ಬಂದಿದ್ದು ಸುಮಾರು 3 ಬಾರಿ ಅಡಿಗ ಕೊಲೆಗೆ ಸಂಚು ಹೂಡಿದ್ದ, ಆದರೆ ವಿಫಲನಾಗಿದ್ದ, ಡಿ.31 ಮತ್ತು ಜ.1ರಂದು ಕೂಡ ಆತ ವಂಡಾರಿನಲ್ಲಿಯೇ ಇದ್ದ. ಆತ, ರಮೇಶ್ ಬಾಯರಿ ಮತ್ತು ಸುಬ್ರಹ್ಮಣ್ಯ ಉಡುಪ ಸೇರಿ ಈ ಅಂತಿಮ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ.
ಉಮೇಶ್ ತನ್ನ ಇತರ 5 ಮಂದಿ ಸಹಚರರೊಂದಿಗೆ ಬೆಂಗಳೂರಿನಿಂದ 1 ಟಾಟಾ ಸಫಾರಿ ಮತ್ತು ಸ್ಕಾರ್ಪಿಯೋ ಕಾರಿನಲ್ಲಿ ಬಂದು, ಅಡಿಗರ ಮನೆಯ ಬಳಿ ಕಾದು ನಿಂತಿದ್ದರು. ಅಡಿಗ ಮನೆಯ ಬಳಿ ಬೈಕಿನಲ್ಲಿ ಹೋಗುತ್ತಿದ್ದಾಗ ಅವರನ್ನು ತಡೆದು ನಿಲ್ಲಿಸಿ ಉಮೇಶ್ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು, ಸ್ಕಾರ್ಪಿಯೋದಲ್ಲಿ ಹಾಕಿ ಮದಗದ ಕೆರೆಗೆ ಕೊಂಡೊಯ್ದು ನೈಲಾನ್ ಹಗ್ಗದಿಂದ ಕತ್ತು ಬಿಗಿದು, ಶವಕ್ಕೆ 20 ಕೆ.ಜಿ. ತೂಕದ ಬಟ್ಟನ್ನು ಕಟ್ಟಿ, ಕೆರೆಗೆ ಎಸೆದು ಸೇರಿಕೊಂಡಿದ್ದರು.
ಅವರ ವಾಹನಗಳು ವಂಡಾರಿಗೆ ಬರುವಾಗ ದಾರಿಯಲ್ಲಿ ಬೆಳ್ವೆ ಎಂಬಲ್ಲಿ ನಿಲ್ಲಿಸಿ ಗೂಡಂಗಡಿಯಲ್ಲಿ ಚಹಾ ಕುಡಿದಿದ್ದರು. ಆಗ ಅವರ 'ಕಬ್ಬಾಳಮ್ಮ' ಎಂದು ಬರೆದಿರುವ ಸ್ಕಾರ್ಪಿಯೋ ಕಾರಿನಲ್ಲಿ ದೊಣ್ಣೆ ಇತ್ಯಾದಿಗಳಿದ್ದುದನ್ನು ನೋಡಿದ್ದವರೊಬ್ಬರು ವಾಹನದ ನಂಬರನ್ನು ಗಮನಿಸಿದ್ದರು. ಅಡಿಗರು ಸ್ಕಾರ್ಪಿಯೋ ಕಾರಿನಲ್ಲಿ ಅಪಹರಿಸಲ್ಪಟ್ಟಿದ್ದಾರೆ ಎಂಬ ಸುದ್ದಿ ಓದಿ, ಕಬ್ಬಾಳಮ್ಮ ಹೆಸರಿನ ಸ್ಕಾರ್ಪಿಯೋದ ನಂಬರನ್ನು ಪೊಲೀಸರಿಗೆ ಮುಟ್ಟಿಸಿದ್ದರು.