ಸರ್ಕಾರಿ ಬಸ್-ಟೆಂಪೊ ಡಿಕ್ಕಿ; ಚಾಲಕ ಗಂಭೀರ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ನೆಟ್ಟಣದಲ್ಲಿ ಸೋಮವಾರ ಕೆಎಸ್ಆರ್ಟಿಸಿ ಬಸ್ ಮತ್ತು ಖಾಸಗಿ ಟೆಂಪೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಗಂಭೀರ ಗಾಯಗೊಂಡಿದ್ದು ಉಳಿದಂತೆ 2 ವಾಹನಗಳ ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ.
ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಸಾರಿಗೆ ಬಸ್ ಮತ್ತು ಸುಬ್ರಹ್ಮಣ್ಯದಿಂದ ದೇವರ ದರ್ಶನ ಪಡೆದು ಹಿಂತುರುಗುತ್ತಿದ್ದ ಟೆಂಪೋ ನಡುವೆ ಈ ಘಟನೆ ಸಂಭವಿಸಿದೆ. ಗುದ್ದಿದ ರಭಸಕ್ಕೆ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕ ಪ್ರಕಾಶ್ ಹರಪನಹಳ್ಳಿ (35)ಎಂಬವರನ್ನು ಬಸ್ನಿಂದ ಹೊರಕ್ಕೆ ಎಳೆದು ತೆಗೆಯಲಾಯಿತು. ಅವರ ಕಾಲು,ಹೊಟ್ಟೆಗೆ ಗಂಭೀರ ಗಾಯಗಳಾಗಿವೆ.
ಟೆಂಪೋದಲ್ಲಿದ್ದ ಶೇಖರ (38), ಮಾಧವ (40), ಸೀತಮ್ಮ ಪೊಳಲಿ(55), ಹೇಮಾವತಿ(55), ಈಶ್ವರ, ನಿಶ್ಮಿತಾ ಗಂಭೀರ ಗಾಯಗೊಂಡಿದ್ದಾರೆ.
ಅಪಘಾತ ವಿಷಯ ತಿಳಿದು ನೆಟ್ಟಣ ಬಿಳಿನೆಲೆಯ ಜಯಕರ್ನಾಟಕ ಸದಸ್ಯರು ಧಾವಿಸಿ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.
ಗಾಯಾಳುಗಳನ್ನು 108 ಆರೋಗ್ಯರಕ್ಷಾ ಕವಚ ಅಂಬುಲೆನ್ಸ್ನಲ್ಲಿ ಕಡಬ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕೊಂಡೊಯ್ಯಲಾಯಿತು.
ತಾ.ಪಂ ಸದಸ್ಯೆ ಸರೋಜಿನಿ, ಜಯಕರ್ನಾಟಕ ಗೌರವ ಅಧ್ಯಕ್ಷ ಸಂತೋಷ್ ಗುಂಡ್ಯ, ಗ್ರಾ.ಪಂ ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಬಿಳಿನೆಲೆ, ಸ್ಥಳೀಯರಾದ ಪ್ರಕಾಶ್, ಕೆ.ಜಿ.ಉದಯ್ ಕುಮಾರ್ ಪಿ.ಆರ್., ಪ್ರಸಾದ್ ಕೆ.ಜಿ., ಜಯಪ್ರಕಾಶ್ ಸಹಕರಿಸಿದರು. ಕಡಬ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕಾಗಮಿಸಿ ರಸ್ತೆ ಮಾರ್ಗ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಸಹಕರಿಸಿದರು.
ಆಂಬುಲೆನ್ಸ್ಗೆ ಪ್ರತಿಭಟನೆ
ಅಪಘಾತ ಸಂಭವಿಸಿದ ಸ್ಥಳ ಕಡಬ ಪೇಟೆಗೆ ಹತ್ತಿರವಾಗಿದೆ. ಕಡಬ ಕೇಂದ್ರದಲ್ಲಿ 108 ಆರೋಗ್ಯರಕ್ಷಾ ಕವಚ ಆಂಬುಲೆನ್ಸ್ ವ್ಯವಸ್ಥೆ ಇಲ್ಲದ ಕಾರಣ, ದೂರದ ಸುಬ್ರಹ್ಮಣ್ಯದ ಆಂಬುಲೆನ್ಸ್ನ್ನು ಅಪಘಾತ ನಡೆದ ಸ್ಥಳಕ್ಕೆ ಕರೆಸಲಾಯಿತು. ಅಪಘಾತ ನಡೆದ ಸ್ಥಳದಲ್ಲಿ ಸಾರ್ವಜನಿಕರು ರಸ್ತೆ ತಡೆ ಮಾಡಿ ಕಡಬ ಕೇಂದ್ರಕ್ಕೆ 108 ಆಂಬುಲೆನ್ಸ್ ವ್ಯವಸ್ಥೆ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಕೆಲ ಹೊತ್ತು ರಸ್ತೆ ತಡೆಗೊಳಿಸಿದ ಸಾರ್ವಜನಿಕರನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಾಂತ್ವನಗೊಳಿಸಿ ಈ ಭಾಗಕ್ಕೆ 108 ವ್ಯವಸ್ಥೆ ಮಾಡುವಲ್ಲಿ ಸಂಬಂಧ ಪಟ್ಟವರ ಗಮನಕ್ಕೆ ತಂದು ಸೇವೆಗೆ ಶ್ರಮಿಸುವುದಾಗಿ ಭರವಸೆ ನೀಡಿದ ಬಳಿಕ ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟು ರಸ್ತೆ ತೆರವುಗೊಳಿಸಿದರು.
ಈ ಹಿಂದೆ ಕಡಬ ಕೇಂದ್ರದಲ್ಲಿ 108 ಆಂಬುಲೆನ್ಸ್ ಸೇವೆ ಇತ್ತು. ನಂತರ ಈ ವ್ಯವಸ್ಥೆ ರದ್ದು ಪಡಿಸಲಾಗಿದೆ. ಈ ಬಗ್ಗೆ ಕಡಬ ಸೇರಿದಂತೆ ಸುತ್ತಮುತ್ತಲಿನ ಜನರು ಅಸಮಾಧಾನ ಹೊಂದಿದ್ದು ಕಡಬ ಕೇಂದ್ರಕ್ಕೆ 108 ಸೇವೆ ಒದಗಿಸುವಂತೆ ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ. ಈ ಸಂದರ್ಭ ಬಿಳಿನೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಜಯಕರ್ನಾಟಕ ಸಂಘಟನೆಯ ಸದಸ್ಯರು, 100ಕ್ಕೂ ಮುಕ್ಕಿ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.