ಚಿನ್ನ ಪಾಲಿಶ್ ನೆಪದಲ್ಲಿ ವಂಚಿಸುತ್ತಿದ್ದ ಬಿಹಾರದ ಇಬ್ಬರಿಗೆ ಧರ್ಮದೇಟು
ಬ್ರಹ್ಮಾವರ: ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಪಂಗನಾಮ ಹಾಕಲೆತ್ನಿಸುತ್ತಿದ್ದ ಬಿಹಾರ ಮೂಲದ ಇಬ್ಬರು ವ್ಯಕ್ತಿಗಳನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ಬಿಗಿದ ಘಟನೆ ಇಲ್ಲಿನ ಗಿಳಿಯಾರು ಗ್ರಾಮದ ಮೂಡುಗಿಳಿಯಾರು ಎಂಬಲ್ಲಿ ಸೋಮವಾರ ನಡೆದಿದೆ.
ಇಲ್ಲಿನ ಕಲಾವತಿ ಹಂದೆ ಎನ್ನುವವರ ಮನೆಗೆ ಸೋಮವಾರ ಬೆಳಗ್ಗೆ 11.30 ಗಂಟೆಗೆ ಆಗಮಿಸಿದ ಬಿಹಾರಿಗಳಾದ ಲಾಲನ್ (32) ಮತ್ತು ಹರ್ಮಿಂದರ್ (32) ಚಿನ್ನದ ಮತ್ತು ಬೆಳ್ಳಿಯ ಸಾಮಾನುಗಳನ್ನು ತೊಳೆದು ಪಾಲೀಶ್ ಮಾಡಿ ಕೊಡುತ್ತೇವೆ ಎಂದು ಹೇಳಿದರು.
ಅವರನ್ನು ನಂಬಿದ ಕಲಾವತಿ ಅವರು ತಮ್ಮ 2 ಪವನ್ ತೂಕದ 2 ಬಳೆಗಳನ್ನು ಪಾಲಿಶ್ ಮಾಡಲು ನೀಡಿದರು. ಆರೋಪಿಗಳು ತಮ್ಮಲ್ಲಿದ್ದ ದ್ರಾವಣಕ್ಕೆ ಬಳೆಗಳನ್ನು ಹಾಕಿ ತೊಳೆದು, ನಂತರ ಪೇಪರಿನಲ್ಲಿ ಸುತ್ತಿ ಕಲಾವತಿಯವರಿಗೆ ನೀಡಿ ಯಾವುದೇ ಸಂಭಾವನೆ ಪಡೆಯದೆ ಹಿಂದುರುಗಿದರು.
ನಂತರ ಕಲಾವತಿ ಅವರು ಪೇಪರನ್ನು ಬಿಚ್ಚು ನೋಡಿದಾಗ ಬಳೆಗಳು ಬದಲಾಗಿರುವುದು ತಿಳಿಯಿತು. ತಕ್ಷಣ ಅವರು ಬೊಬ್ಬೆ ಹಾಕಿದರು.
ಆದಾಗಲೇ ಆರೋಪಿಗಳು ಪರಾರಿಯಾಗಿದ್ದರು. ಬೊಬ್ಬೆ ಕೇಳಿ ಬಂದ ಸ್ಥಳಿಯರು ಸುತ್ತಮುತ್ತ ಹುಡುಕಿದಾಗ ಅನತಿ ದೂರದಲ್ಲಿ ಆರೋಪಿಗಳು ಸಿಕ್ಕಿ ಹಾಕಿಕೊಂಡರು.
ಅವರನ್ನು ಹಿಡಿದ ಸ್ಥಳೀಯರು ಇಬ್ಬರನ್ನೂ ಚೆನ್ನಾಗಿ ತದುಕಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕೋಟ ಠಾಣೆಯ ಪೊಲೀಸರು ಆರೋಪಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.