ಜಿಲ್ಲೆಗೆ ಬಂದ್ರೆ ಶಿಂಧೆಗೆ ಘೆರಾವ್ ಬಿಜೆಪಿ ಯುವಮೋರ್ಚಾ ಎಚ್ಚರಿಕೆ
ಮಂಗಳೂರು: 'ಬಿಜೆಪಿ ಹಾಗೂ ಆರ್ಎಸ್ಎಸ್ನ್ನು ಹಿಂದೂ ಭಯೋತ್ಪಾದನೆ' ಎಂದು ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಸುಶಿಲ್ ಕುಮಾರ್ ಶಿಂಧೆ ಜಿಲ್ಲೆಗೆ ಆಗಮಿಸಿದರೆ ಘೆರಾವ್ ಹಾಕುವುದಾಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಎಚ್ಚರಿಕೆ ನೀಡಿದ್ದು, ಜ.24ರಂದು ಜಿಲ್ಲೆಯಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಿದೆ.
ಶಿಂಧೆ ತಕ್ಷಣ ಹೇಳಿಕೆ ವಾಪಾಸ್ ಪಡೆದು ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಅವರಿಗೆ ಘೆರಾವ್ ಹಾಕಲಾಗುವುದು. ಜಿಲ್ಲೆಗೆ ಬಂದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಯುವಮೋರ್ಚಾ ಅಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
24ರಂದು ಪ್ರತಿಭಟನೆ: ಶಿಂಧೆ ಹೇಳಿಕೆ ವಿರೋಧಿಸಿ ಜ.24 ರಂದು ಬೆಳಗ್ಗೆ 10.30ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಲಿದೆ. ದೇಶಾದ್ಯಂತ ಪ್ರತಿಭಟನೆಯ ಕರೆಯ ಮೇರೆಗೆ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.