ರಬ್ಬರ್ ತೋಟಕ್ಕೆ ಬೆಂಕಿ: ಹಾನಿ (ಸುದ್ದಿ ಸಂಕ್ಷೇಪ)
ವಿಟ್ಲ: ಕೋಡಪದವಿನ ಬೊಣ್ಯಕುಕ್ಕು ಎಂಬಲ್ಲಿ ರಬ್ಬರ್ ತೋಟವೊಂದಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ ಸುಮಾರು 3 ಎಕ್ರೆ ಪ್ರದೇಶದ ರಬ್ಬರ್ ಸಸಿಗಳು ಹಾನಿಗೊಳಗಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಬಂಟ್ವಾಳ ಮತ್ತು ಪುತ್ತೂರು ಅಗ್ನಿಶಾಮಕ ಸಿಬ್ಬಂದಿ ಮಧ್ಯಾಹ್ನದಿಂದ ಸಂಜೆವರೆಗೆ ಸತತ ಕಾರ್ಯಾಚರಣೆ ಮಾಡಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುತ್ತೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ಲೋಕೇಶ್, ಕೆ ನವೀನ್, ಈಶ್ವರ, ಹರಿಪ್ರಸಾದ್, ಚಾಲಕ ಆನಂದ ಇದ್ದರು.
ರತ್ನಾಕರವರ್ಣಿ ಪ್ರಶಸ್ತಿಗೆ ರವಿರಾಜ ಬಲ್ಲಾಳ್ ಆಯ್ಕೆ
ಬೆಂಗಳೂರು: ಬೆಂಗಳೂರಿನ ದಕ್ಷಿಣ ಕನ್ನಡ ಜೈನ ಮೈತ್ರೀಕೂಟ ನೀಡುವ 'ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ'ಗೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಆದರ್ಶ ಶ್ರಾವಕ ಮತ್ತು ಜೈನ ಸಾಹಿತಿ ರವಿರಾಜ ಬಲ್ಲಾಳ್ ಬಂಗವಾಡಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10,000 ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಜ.26ರಂದು ಬಸವನಗುಡಿಯಲ್ಲಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಪ್ರಶಸ್ತಿಯನ್ನು ಶಿಕ್ಷಣ ತಜ್ಞ ಪ್ರೊ.ಕೆ.ಈ.ರಾಧಾಕೃಷ್ಣ ಅವರು ಪ್ರದಾನ ಮಾಡಲಿದ್ದಾರೆ ಎಂದು ಮೈತ್ರಿಕೂಟದ ಅಧ್ಯಕ್ಷರಾದ ಧರ್ಮಸ್ಥಳದ ಸುರೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವತಿ ಮೇಲೆ ಅತ್ಯಾಚಾರ, ಯುವಕ ಪರಾರಿ
ಸುಳ್ಯ: ವಿವಾಹಿತ ಯುವಕನೊಬ್ಬ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ಸಮೀಪದ ಕೊಡಿಯಾಲಬೈಲು ಅಮೈ ನಿವಾಸಿ ಅಶ್ರಫ್ ಪ್ರಕರಣದ ಆರೋಪಿಯಾಗಿದ್ದು ಪರಾರಿಯಾಗಿದ್ದಾನೆ. ಈತ ತನ್ನ ಮನೆಗೆ ಬಂದ ನೆರೆ ಮನೆಯ ಯುವತಿಯನ್ನು ಬಲಾತ್ಕಾರ ಮಾಡಿ ಅತ್ಯಾಚಾರ ನಡೆಸಿದ್ದಾನೆಂದು ಹೇಳಲಾಗಿದ್ದು, ಈ ವಿಚಾರ ಗೊತ್ತಾಗಿ ಸುತ್ತಮುತ್ತಲಿನ ಜನ ಸೇರುತ್ತಿದ್ದಂತೆ ಈತ ಸ್ಥಳದಿಂದ ಪರಾರಿಯಾಗಿದ್ದಾನೆ. ಯುವತಿಯನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸುಳ್ಯ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ಗರಡಿಮಕ್ಕಿಯಲ್ಲಿ ಆಕಸ್ಮಿಕ ಬೆಂಕಿ: ಹಾನಿ
ಕುಂದಾಪುರ: ಇಲ್ಲಿನ ಕೋಟದ ಗರಡಿಮಕ್ಕಿ ಎಂಬಲ್ಲಿನ ಹುಲ್ಲು ಹಾಗೂ ಗಿಡಗಂಟಿಗಳು ಬೆಳದಿರುವ ಸುಮಾರು 8 ಎಕ್ರೆ ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಮಂಗಳವಾರ ಸಂಭವಿಸಿದೆ. ಮೂಡುಗಿಳಿಯಾರು ಶಾಲೆಯ ಸಮೀಪದ ಈ ಜಮೀನು ಮಂಗಳೂರಿನ ನಿವಾಸಿಯೊಬ್ಬರದಾಗಿದ್ದು, ಮಂಗಳವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಅದು ಹುಲ್ಲು ಗಿಡಗಂಟಿಗಳ ಮಧ್ಯೆ ಹಬ್ಬುತ್ತಾ ಸುತ್ತಮುತ್ತ ಹರಡಿತ್ತು. ಕೂಡಲೇ ಸ್ಥಳೀಯರ ಮಾಹಿತಿಯ ಮೇರೆಗೆ ಆಗಮಿಸಿದ ಕುಂದಾಪುರ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಸಂಪೂರ್ಣ ಯಶಸ್ವಿಯಾದರು.