ಇಂದಿನಿಂದ ಉಚಿತ ಸರ್ಜರಿ ತಪಾಸಣೆ (ಸುದ್ದಿ ಸಂಕ್ಷೇಪ)
ಮಂಗಳೂರು: ನಗರದ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಜ.24 ಮತ್ತು 25ರಂದು ಉಚಿತ ಸರ್ಜರಿ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಶಿಬಿರ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರ ವರೆಗೆ ನಡೆಯಲಿದೆ. ಚಿಕಿತ್ಸೆಯಲ್ಲಿ ರಿಯಾಯ್ತಿ ನೀಡಲಾಗುವುದು ಎಂದು ವೈದ್ಯಾಧಿಕಾರಿ ಡಾ.ಮಧುಸೂದನ್ ಉಪಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾದಚಾರಿ ಸಾವು
ಮಂಗಳೂರು: ರಾ.ಹೆ.75ರ ಕಣ್ಣೂರಿನಲ್ಲಿ ಟೆಂಪೋ ಡಿಕ್ಕಿಯಾಗಿ ಪಾದಚಾರಿ ಅಶ್ರಫ್ (40) ಸಾವಿಗೀಡಾದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಗಂಭೀರ ಗಾಯಗೊಂಡ ಅಶ್ರಫ್ನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಕಂಕನಾಡಿ ಪೊಲೀಸರಿಗೆ ದೂರು ನೀಡಲಾಗಿದೆ.
ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ
ಮೂಲ್ಕಿ: ಕಾರ್ನಾಡು ಪೆಟ್ರೋಲ್ ಪಂಪ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಲ್ಕಿ ಕಡೆಯಿಂದ ಹಳೆಯಂಗಡಿಯಾಚೆ ಹೋಗುತ್ತಿದ್ದ ಟಿಪ್ಪರ್ ಲಾರಿಯೊಂದು ಎದುರಿನಿಂದ ಓವರ್ಟೇಕ್ ಮಾಡಿಕೊಂಡು ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ನ ಮೇಲ್ಭಾಗ ಕಳಚಿದ್ದು ವಿದ್ಯುತ್ ಸಂಪರ್ಕ ಕಡಿದು ಹೋಗಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ.