ಡೆಂಟಲ್ ವಿದ್ಯಾರ್ಥಿಗಳ ಘರ್ಷಣೆ: 8 ಮಂದಿ ಸೆರೆ
ಸುಳ್ಯ: ಎರಡು ವಾರದ ಹಿಂದೆ ಸುಳ್ಯದ ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳ 2 ತಂಡಗಳ ನಡುವೆ ಹೊಡೆದಾಟ ನಡೆದಿದ್ದು, ಇದಕ್ಕೆ ಪ್ರತಿಕಾರವಾಗಿ ವಿದ್ಯಾರ್ಥಿಗಳ ಒಂದು ತಂಡ, ಇನ್ನೊಂದು ತಂಡದ ಕೆಲವು ವಿದ್ಯಾರ್ಥಿಗಳು ವಾಸವಿರುವ ಜಟ್ಟಿಪಳ್ಳದ ಮನೆಯೊಂದಕ್ಕೆ ರಾತ್ರಿ ವೇಳೆಯಲ್ಲಿ ನುಗ್ಗಿ ದಾಂದಲೆ ನಡೆಸಿದ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಡೆಂಟಲ್ ಕಾಲೇಜಿನ ಕೆಲವು ವಿದ್ಯಾರ್ಥಿಗಳು ವಾಸವಿರುವ ಜಟ್ಟಿಪಳ್ಳದ ಈ ಮನೆಗೆ ರಾತ್ರಿ 12.45ಕ್ಕೆ ನುಗ್ಗಿದ ಕೇರಳದಲ್ಲಿ ಮನೆ ಮಾಡಿಕೊಂಡಿರುವ ಅದೇ ಕಾಲೇಜಿನ ಸುಮಾರು 20 ಮಂದಿ ಡೆಂಟಲ್ ವಿದ್ಯಾರ್ಥಿಗಳು, ಮನೆಯಲ್ಲಿದ್ದ ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದರಲ್ಲದೆ, ಮನೆಯ ಕಿಟಕಿ ಗಾಜುಗಳನ್ನು ಒಡೆದು ಹಾಕಿದರು. ಸ್ಥಳಕ್ಕೆ ಭೇಟಿ ನೀಡಿದ ಸುಳ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ 8 ಮಂದಿಯನ್ನು ಬಂಧಿಸಿದ್ದಾರೆ.