ನೇತ್ರಾವತಿ ನಾಡಿನಲ್ಲೇ ನೀರಿಗೆ ದುರ್ಗತಿ!
ಮೌನೇಶ್ ವಿಶ್ವಕರ್ಮ
ಬಂಟ್ವಾಳ: ಇನ್ನೂ ಜನವರಿ ತಿಂಗಳು ಪೂರ್ತಿಯಾಗಿಲ್ಲ, ಆದರೆ ಈಗಲೇ ಜನ ಕುಡಿಯುವ ನೀರಿಗಾಗಿ 'ವರಿ' ಮಾಡಬೇಕಾದ ಸ್ಥಿತಿ ಬಂಟ್ವಾಳದಲ್ಲಿ ಉಂಟಾಗಿದೆ.
ತಾಲೂಕಿನ 47 ಗ್ರಾಮ ಪಂಚಾಯಿತಿಗಳ ಪೈಕಿ ಸುಮಾರು 30 ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗಲೇ ನೀರಿನ ಬವಣೆ ಕಾಡುತ್ತಿದೆ. ಕಳೆದ ವರ್ಷ ಬೇಸಗೆಯಲ್ಲಿ ಗ್ರಾಮದ ಜನತೆಗೆ ಕುಡಿಯುವ ನೀರು ಒದಗಿಸಲು ಕೆಲ ಪಂಚಾಯಿತಿಗಳು ಪಟ್ಟ ಪಾಡು ಅಷ್ಟಿಷ್ಟಲ್ಲ. ಆದರೆ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಕಾಡುತ್ತಿದ್ದ ಬೇಸಗೆ ಬಿಸಿ ಈ ವರ್ಷ ಜನವರಿಯಲ್ಲೇ ಕಾಡುತ್ತಿರುವುದು ತಾಲೂಕಿನ ಜನತೆಯ ಆತಂಕಕ್ಕೆ ಕಾರಣವಾಗಿದೆ.
ಬವಣೆ ಈಗಲೇ ಆರಂಭ: ಕಳೆದ ವರ್ಷ ತಾಲೂಕಿನ ಕೊಳ್ನಾಡು, ನರಿಂಗಾನ, ಪಜೀರು, ಕಾವಳಪಡೂರು ಗ್ರಾಮ ಪಂಚಾಯಿತಿಗಳು ಹಾಗೂ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಟ್ಯಾಂಕರ್ ಮೂಲಕ ನೀರು ಒದಗಿಸುವ ಸ್ಥಿತಿ ಎದುರಾಗಿತ್ತು. ಆದರೆ ಈ ಬಾರಿ ಕುಡಿಯುವ ನೀರಿನ ಬವಣೆ ಬಹುಬೇಗನೇ ಬಂಟ್ವಾಳವನ್ನು ಕಾಡುವ ಸಾಧ್ಯತೆ ಇದೆ.
ಅಮ್ಟಾಡಿ, ಬಾಳೆಪುಣಿ, ಬಾಳ್ತಿಲ, ಚೆನ್ನೈತ್ತೋಡಿ, ಕಡೇಶ್ವಾಲ್ಯ, ಕರಿಯಂಗಳ, ಕರೋಪಾಡಿ, ಕಾವಳಪಡೂರು, ಕಾವಳ ಮೂಡೂರು, ಕೆದಿಲ, ಕೇಪು, ಕುಕ್ಕಿಪ್ಪಾಡಿ, ಕೊಳ್ನಾಡು, ಮಾಣಿ, ನರಿಂಗಾನ, ನಾವೂರು, ಪೆರ್ನೆ, ಪೆರುವಾಯಿ, ಪಿಲಾತಬೆಟ್ಟು, ಸಜಿಪಮೂಡ, ಸಜಿಪಮುನ್ನೂರು, ಸಂಗಬೆಟ್ಟು, ಸರಪಾಡಿ, ತುಂಬೆ, ಉಳಿ, ವಿಟ್ಲ, ವಿಟ್ಲ ಮುಡ್ನೂರು, ಬಡಗಬೆಳ್ಳೂರು, ಪಜೀರು ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ನೀರಿನ ಬವಣೆಯ ಮುನ್ಸೂಚನೆ ಬಂದಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು, ಪಲ್ಲಮಜಲು, ಕಾಮಾಜೆ, ಗಾಣದಕೋಡಿ, ಬಾರೆಕಾಡು ಆಶ್ರಯ ಕಾಲೋನಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಗೋಚರಿಸುತ್ತಿದೆ. ಇರುವ ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ, ಹೊಸ ಬೋರ್ವೆಲ್ಗಳನ್ನು ತೆಗೆಸಿಕೊಡಿ ಎಂಬ ಬೇಡಿಕೆಗಳೂ ಕೇಳಿಬರುತ್ತಿದೆ.
ಏನು ಕಾರಣ..: ನೀರಿನ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವುದು ಈ ಬರಕ್ಕೆ ಕಾರಣ ಎನ್ನುವುದು ವೈಜ್ಞಾನಿಕ ಸತ್ಯ. ಕೊಳವೆ ಬಾವಿಗಳನ್ನು ತೆರೆಯುವ ವೇಳೆಯಲ್ಲಿ ಸೂಕ್ತ ಕಾನೂನು ಪರಿಪಾಲನೆಯಾಗದಿರುವುದೂ ಅತಿ ಹೆಚ್ಚು ಕೊಳವೆ ಬಾವಿಗಳ ಸೃಷ್ಟಿಗೆ ಕಾರಣವಾಗಿದೆ. ಕೆಲ ಪಂಚಾಯಿತಿಗಳಲ್ಲಿ ನೀರು ಸರಬರಾಜು ವ್ಯವಸ್ಥೆಯಲ್ಲಿ ಉಂಟಾಗಿರುವ ಲೋಪ ಈ ಬರಕ್ಕೆ ಕಾರಣವಾಗುತ್ತಿದ್ದರೆ, ಇನ್ನೂ ಕೆಲವೆಡೆ ಪಂಪ್ ಹಾಳಾಗಿರುವುದು, ನಿರ್ವಹಣೆಯಲ್ಲಿನ ಲೋಪ, ನಿರ್ಲಕ್ಷ್ಯ, ನೀರಿನ ಅತಿ ಬಳಕೆಯೂ ಕ್ಷಣಿಕ ಬರಕ್ಕೆ ಕಾರಣವಾಗುತ್ತಿದೆ.
ನೇತ್ರಾವತಿ ನಾಡಲ್ಲೇ ಹಾಹಾಕಾರ: ಮಂಗಳೂರು ನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ನೇತ್ರಾವತಿ ಹರಿಯುವುದು ಬಂಟ್ವಾಳ ತಾಲೂಕಿನಲ್ಲಿ. ಆದರೆ ಬಂಟ್ವಾಳದ ಜನತೆಯೇ ಕುಡಿಯುವ ನೀರಿಗೆ ಹಾಹಾಕಾರ ಹಾಕುವ ಸ್ಥಿತಿ ಬಂದರೆ ನೇತ್ರಾವತಿಯ ಹೆಸರಿನಲ್ಲೂ ಕಾವೇರಿ ಮಾದರಿ ಹೋರಾಟ ನಡೆಯುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಈಗಲೇ ವರುಷವಿಡಿ ಬರಿದಾಗಿ, ಮಳೆಗಾಲದಲ್ಲಿ ಮಾತ್ರ ಮೈದುಂಬಿ ಹರಿಯುವ ನೇತ್ರಾವತಿಯಿಂದ ಕೃಷಿಕರಿಗೆ ಬೇಕಾಗುವಷ್ಟು ನೀರು ಸಿಗುತ್ತಿಲ್ಲ. ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಳ್ಳಲಿದೆ ಎಂಬ ಅಂತೆ ಕಂತೆಗಳ ಸುದ್ದಿ ಯಾವಾಗ ಅನುಷ್ಠಾನಗೊಳ್ಳುತ್ತದೆಯೋ ಗೊತ್ತಿಲ್ಲ, ಆದರೆ ಜೀವ ನದಿ ನೇತ್ರಾವತಿಗೆ ಬರುವ ಕಷ್ಟಗಳು ಆ ಊರ ಜನತೆಯನ್ನೂ ಕಾಡುತ್ತಿರುವುದು ಮಾತ್ರ ಸುಳ್ಳಲ್ಲ.