ಬೆಂಕಿ ಆಕಸ್ಮಿಕ: ಬಚ್ಚಲು ಮನೆ ಭಸ್ಮ (ಸುದ್ದಿ ಸಂಕ್ಷೇಪ)
ಮೂಲ್ಕಿ: ಬುಧವಾರ ನಡುರಾತ್ರಿ ಮೂಲ್ಕಿಯ ಅಕ್ಕಸಾಲಿಗರ ಕೇರಿಯ ಗುರುದತ್ ಶೆಣೈ ಎಂಬವರ ಮನೆಯ ಬಚ್ಚಲು ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬಚ್ಚಲು ಮನೆಯ ಮಾಡು, ಪಕ್ಕಾಸು ಸೇರಿದಂತೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಕೂಡಲೆ ಮೂಲ್ಕಿ ಪೊಲೀಸ್ ಠಾಣೆ ಹಾಗೂ ಅಗ್ನಿ ಶಾಮಕದಳಕ್ಕೆ ದೂರವಾಣಿ ಕರೆ ಮಾಡಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಮನೆಯ ಸುತ್ತ ತುಂಬ ಮನೆಗಳಿದ್ದು, ಅಗ್ನಿ ಶಾಮಕ ದಳದವರು ಕೂಡಲೆ ಆಗಮಿಸದಿದ್ದರೆ ಹೆಚ್ಚಿನ ಅನಾಹುತವಾಗುವ ಸಂಭವವಿತ್ತು. ಸುಮಾರು ರು. 1 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೆಸ್ಕಾಂ ತಾಂತ್ರಿಕ ನಿರ್ದೇಶಕ ಡಾ.ಶಿವಕುಮಾರ್
ಮಂಗಳೂರು: ಮೆಸ್ಕಾಂನ ನೂತನ ತಾಂತ್ರಿಕ ನಿರ್ದೇಶಕರಾಗಿ ಡಾ.ಡಬ್ಲ್ಯೂ.ಎಂ.ಶಿವಕುಮಾರ್ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. 1980ರಲ್ಲಿ ಕೆಇಬಿ ಸಹಾಯಕ ಎಂಜಿನಿಯರ್ರಾಗಿ ನೇಮಕಗೊಂಡ ಇವರು ಕೆಪಿಟಿಸಿಎಲ್ನಲ್ಲೂ ವಿವಿಧ ಹುದ್ದೆ ನಿರ್ವಹಿಸಿದ್ದರು. ಪಿಎಚ್ಡಿ ಪಡೆದ ಇವರು ಮಾಹಿತಿ ತಂತ್ರಜ್ಞಾನದಲ್ಲಿ ವಿಶೇಷ ಅನುಭವ ಹಾಗೂ ಪದವಿ ಪಡೆದಿದ್ದಾರೆ. ಬೆಸ್ಕಾಂ ತಾಂತ್ರಿಕ ನಿರ್ದೇಶಕರಾಗಿದ್ದರು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಪ್ರತಿಭಟನೆ: ಕಾಂಗ್ರೆಸ್ ಕಾರ್ಯಕರ್ತರ ಸೆರೆ
ಸುಳ್ಯ: ಮಿನಿ ವಿಧಾನಸೌಧ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರ ಹೆಸರು ಮುದ್ರಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ ಘಟನೆ ನಡೆಯಿತು. ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಪ್ರತಿಭಟನಾ ಸಭೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಬಳಿಕ ಸಮಾರಂಭ ನಡೆಯುತ್ತಿದ್ದ ತಾಲೂಕು ಕಚೇರಿ ಬಳಿ ಮೆರಣಿಗೆಯಲ್ಲಿ ತೆರಳತೊಡಗಿದರು. ಈ ವೇಳೆ ಎಪಿಎಂಸಿ ಬಳಿ ಅವರನ್ನು ತಡೆದ ಪೊಲೀಸರು, ಬಂಧಿಸಿ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ಕೂಡಿ ಹಾಕಿದರು. ಸಮಾರಂಭ ಮುಗಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್, ಯುವ ಕಾಂಗ್ರೆಸ್ ಅಧ್ಯಕ್ಷ ಯತೀಶ್ ಗೌಡ, ಎನ್ಎಸ್ಯುಐ ಅಧ್ಯಕ್ಷ ಕೆ.ಕೆ. ಹರಿಪ್ರಸಾದ್, ತಾಪಂ ಸದಸ್ಯೆ ವಿಮಲಾ ರಂಗಯ್ಯ ಸೇರಿದಂತೆ ಅನೇಕ ನಾಯಕರು ಈ ವೇಳೆ ಇದ್ದರು.
ಕಿಲೆಂಜೂರು; ಬ್ರಹ್ಮಕಲಶಾಭಿಷೇಕ ತೋರಣ ಮುಹೂರ್ತ
ಮೂಲ್ಕಿ ಕಿಲೆಂಜೂರಿನಲ್ಲಿ ಶ್ರೀ ಸರಳ ಧೂಮಾವತಿ ದೈವಸ್ಥಾನದಲ್ಲಿ ಜ.25ರಂದು ನಡೆಯಲಿರುವ ಬ್ರಹ್ಮಕಲಶಾಭಿಷೇಕದ ಪೂರ್ವಭಾವಿಯಾಗಿ ದೈವಸ್ಥಾನದಲ್ಲಿ ಜರುಗಿದ ತೋರಣ ಹಾಗೂ ಉಗ್ರಾಣ ಮುಹೂರ್ತವನ್ನು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರ ಕೆ. ವಾಸುದೇವ ಆಸ್ರಣ್ಣ ನೆರವೇರಿಸಿದರು. ದೈವಸ್ಥಾನದ ಮಹಾದ್ವಾರವನ್ನು ಅತ್ತೂರು ಮಾಗಣೆ ಗಣಪತಿ ಮಂದಿರದ ಅತ್ತೂರು ಬೈಲು ಎ ಗಣಪತಿ ಉಡುಪ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಡ್ತಿಮಾರು ಕೆ. ರಾಜೇಂದ್ರ ಶೆಟ್ಟಿ, ಪದ್ಮನಾಭ ಮಾಡ, ಪ್ರಸನ್ನ ಎಲ್.ಶೆಟ್ಟಿ, ಹರೀಶ್ ಶೆಟ್ಟಿ ಮಜಲಗುತ್ತು, ಶಂಭು ಮುಕ್ಕಾಲ್ದಿ ಮತ್ತಿತರರು ಇದ್ದರು.