ಬ್ಯಾರಿಕೇಡ್ ಬೇಡ: ಗ್ರಾಮಸ್ಥರ ಪ್ರತಿಭಟನೆ
ಸುಂಟಿಕೊಪ್ಪ: ಸಾರ್ವಜನಿಕರ ರಸ್ತೆಯಲ್ಲಿ ಪೊಲೀಸ್ ಇಲಾಖೆಯವರು ಬ್ಯಾರಿಕೇಡ್ ಅಳವಡಿಸಿ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿರುವ ಘಟನೆ ಕಂಬಿಬಾಣೆಯಲ್ಲಿ ನಡೆದಿದೆ.
ಊರುಗುಪ್ಪೆ ಪೈಸಾರಿ ವ್ಯಾಪ್ತಿಯಲ್ಲಿರುವ ತೋಟವೊಂದರ ಮೂಲಕಅಕ್ರಮವಾಗಿ ಬೀಟೆ ಮರ ಸಾಗಿಸಲಾಗುತ್ತಿದೆ ಎಂಬ ಕಾರಣ ನೀಡಿ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಈ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ಇದರಿಂದ ರಾತ್ರಿ ವೇಳೆ ಯಾವುದೇ ಚೆಕ್ ಪೋಸ್ಟ್ಗಳಲ್ಲಿ ನಡೆಸದ ತಪಾಸಣೆಯ ರೀತಿಯಲ್ಲಿ ತೋಟವೊಂದರ ಸಾರ್ವಜನಿಕರನ್ನು, ವಾಹನಗಳನ್ನು ತಡೆಹಿಡಿದು ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದರು ಎನ್ನಲಾಗಿದೆ. ಈ ಭಾಗದ ಜನತೆ ಪ್ರತಿನಿತ್ಯ ಕಾಡಾನೆಗಳ ಹಾವಳಿ ಎದುರಿಸುತ್ತಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಈ ರಸ್ತೆಯ ಮೂಲಕವೇ ಹಾದುಹೋಗಬೇಕಾಗಿದೆ. ತಪಾಸಣೆಯ ನೆಪದಲ್ಲಿ ಹಾದಿಹೋಕರನ್ನು ಮತ್ತು ವಾಹನಗಳನ್ನು ಗಂಟೆಗಟ್ಟಲೆ ಕಾಯಿಸಲಾಗುತ್ತಿದೆ. ಗ್ರಾಮಸ್ಥರು ಅವರವರ ಮನೆಗೆ ತೆರಳಬೇಕಾದರೆ ಸಹಿ ಹಾಕಿಸಿಕೊಳ್ಳಲಾಗುತ್ತಿದೆ.
ಅಲ್ಲದೆ ಪಾನಮತ್ತ ತಪಾಸಣಾಗಾರರು ತಪಾಸಣೆಯ ನೆಪದಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮಂಗಳವಾರದಂದು ಬ್ಯಾರಿಕೇಡ್ ಅಳವಡಿಸಿದ ಸ್ಥಳದಲ್ಲಿ ಪ್ರತಿಭಟನೆಗೆ ಇಳಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿದರು.
ಗ್ರಾ.ಪಂ. ಸದಸ್ಯ ರವಿ, ಗ್ರಾಮಸ್ಥರಾದ ಜಬ್ಬಾರ್ ಕಂಬಿಬಾಣೆ ಬಾಪುಟ್ಟಿ, ಅವಲಕುಟ್ಟಿ, ರಜಾಕ್, ಸಂಶು, ಕೆ.ಸಿ. ಮೊಯಿದ್ದೀನ್, ಇಬ್ರಾಹಿಂ, ಮಣಿಕಂಠ, ಸಮೇಶ್ ಲತೀಫ್ ಇದ್ದರು.