ಸರ್ಕಾರ ಸುಭದ್ರ... ಬಜೆಟ್ ಖಚಿತ...
ಉಡುಪಿ: ಅತ್ತ ಬೆಂಗಳೂರಿನಲ್ಲಿ ಬುಧವಾರ ಸರ್ಕಾರ ಉರುಳುವುದು ಈಗಲೋ ಆಗಲೋ ಎನ್ನುತ್ತಿದ್ದರೇ, ಇತ್ತ ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ಉಪಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಕುಲದೇವರ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ಮಂತ್ರದಂತೆ ಹೇಳುತ್ತಿರುವ, 'ಸರ್ಕಾರ ಸುಭದ್ರವಾಗಿದೆ, ಅವಧಿ ಪೂರೈಸುತ್ತದೆ, ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸುತ್ತಾರೆ...' ಎಂಬ ಸಾಲುಗಳನ್ನು ಪುನರುಚ್ಛರಿಸಿದರು. ಕೆಜೆಪಿ ನಾಯಕರ ಹೇಳಿಕೆಗಳು ಆನೆಯ ಮುಂದೆ ಇರುವೆ ಬೊಬ್ಬೆ ಹಾಕಿದ ಹಾಗಿದೆ, ಅಂತಹ ಇಂದಿರಾ ಗಾಂಧಿ ಅವರಿಂದಲೆ ಬಿಜೆಪಿಯ ಆಟ ಮುಗಿಸುವುದಕ್ಕಾಗಲಿಲ್ಲ, ಇನ್ನು ಇವರೆಲ್ಲಾ ಯಾರು ಎಂದು ಲೇವಡಿ ಮಾಡಿದರು.
ಬೇರೇನಾದ್ರೂ ಕೇಳ್ರಿ: ಅವರು (ಕೆಜೆಪಿಯವರು) ದಿನಾ ಬೆಳಗಾದರೆ ನಿಮ್ಮ ಹತ್ತಿರ (ಮಾಧ್ಯಮ) ಸರ್ಕಾರ ಬೀಳಿಸ್ತೀವಿ ಅಂತ ಗಡುವು ಕೊಡುತ್ತಾರೆ. ನೀವು ಬಂದು ನಮ್ಮ ಹತ್ತಿರ ಕೇಳುತ್ತೀರಿ, ನಾವು ಸರ್ಕಾರಕ್ಕೆ ಏನೂ ಆಗೋದಿಲ್ಲ ಅಂತ ಹೇಳಿ ಹೇಳಿ ಸಾಕಾಗಿದೆ. ಸರ್ಕಾರದ ಬಗ್ಗೆ ಕೇಳೋದನ್ನು ಬಿಟ್ಟು ಬೇರೆನಾದ್ರೂ ಕೇಳಿ ಎಂದು ಮಾಧ್ಯಮಗಳಿಗೆ ತಾಕೀತು ಮಾಡಿದರು.
ರಿಯಾಕ್ಷನ್‌ಗೆ ಟೈಮಿಲ್ಲ: ಶಾಸಕ ಓಲೇಕಾರ್ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಅಂತಹವರ ಹೇಳಿಕೆಗೆಲ್ಲಾ ರಿಯಾಕ್ಟ್ ಮಾಡಲಿಕ್ಕೆ ನನಗೆ ಟೈಮಿಲ್ಲ, ಮಾಡುವುದಕ್ಕೆ ಬೇರೆ ಕೆಲಸ ಇದೆ ಎಂದು ಮಾಧ್ಯಮದ ಮೇಲೆ ಗರಂ ಆದರು.
ನಂತರ ಅವರು ಬ್ರಹ್ಮಾವರ ಇಂದಿರಾನಗರದಲ್ಲಿರುವ ಮಹಾಶಕ್ತಿ ಬ್ರಹ್ಮಾಕಾರ ಸ್ವರೂಪಿಣಿ ಆದಿಮತ್ಯಾಂಬಿಕಾ ದೇವಸ್ಥಾನದ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ಕೆಲಕಾಲ ಭಾಗವಹಿಸಿ ತೆರಳಿದರು.