ಹೊರಬಂದ ನಾಲ್ಕೇ ದಿನದಲ್ಲಿ ಮತ್ತೆ ಜೈಲಿಗೆ
ಮಂಗಳೂರು: ಜೈಲಿನಿಂದ ಹೊರಬಂದ ನಾಲ್ಕೇ ದಿನದಲ್ಲಿ ಆರೋಪಿ ಮತ್ತೆ ಕಳವು ಸೊತ್ತಿನ ಮಾರಾಟಕ್ಕೆ ಹೋಗಿ ಸಿಕ್ಕಿಬಿದ್ದು ಜೈಲು ಪಾಲಾದ ಘಟನೆ ಮಂಗಳೂರಿನ ಕದ್ರಿಯಲ್ಲಿ ಬುಧವಾರ ನಡೆದಿದೆ. ಆರೋಪಿ ವಿನ್ಸಿ ಯಾನೆ ವಿನ್ಸೆಂಟ್ ಚಿನ್ನಾಭರಣ ಕಳವು ಪ್ರಕರಣದಲ್ಲಿ ಮಂಗಳೂರಿನ ಜೈಲಿನಲ್ಲಿದ್ದರು.
ಜ.19ರಂದು ಜೈಲಿನಿಂದ ಜಾಮೀನಿನಲ್ಲಿ ಹೊರಬಂದಿದ್ದನು. ಇನ್ನೂ ನಾಲ್ಕು ದಿನ ಕಳೆದಿಲ್ಲ, ಆಗಲೇ 2 ಚಿನ್ನದ ಸರವನ್ನು ಹಿಡಿದುಕೊಂಡು ಸಹಚರ ನವೀನ್ ಜತೆ ಕದ್ರಿಯ ಫೈನಾನ್ಸ್‌ನಲ್ಲಿ ಅಡವಿರಿಸಲು ಹೋಗುತ್ತಿದ್ದುದು ಪೊಲೀಸರ ಗಮನಕ್ಕೆ ಬಂದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ವಿನ್ಸೆಂಟ್‌ನ್ನು ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಿದರು. ಈತನ ವಿರುದ್ಧ ಉರ್ವ ಹಾಗೂ ಕದ್ರಿಯಲ್ಲಿ 2 ಪ್ರಕರಣವಿದ್ದು, ಒಟ್ಟು 3 ಪ್ರಕರಣ ದಾಖಲಾಗಿತ್ತು. ಈತನಿಂದ ರು. 1.30 ಲಕ್ಷ ಮೌಲ್ಯದ 43 ಗ್ರಾಂ ಚಿನ್ನಾಭರಣವನ್ನು ವಶಪಡಿಸಲಾಗಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.