ಹಳೆ ಚಾಳಿ ಮುಂದುವರಿಸಿದ ಕಾಂಗ್ರೆಸ್: ಗುಜ್ಜಾಡಿ
ಉಡುಪಿ: ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಯೋತ್ಪಾದಕತೆಯ ಮೂಲ ಸಂಘಟನೆಗಳು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಕರೆದಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ಗುರುವಾರ ನಗರದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರಸಭಾ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್, ಕೇಂದ್ರ ಗೃಹಮಂತ್ರಿಯ ಈ ಆರೋಪದ ವಿರುದ್ಧ ಕಾಂಗ್ರೆಸ್ ಮೌನವಾಗಿರುವುದು ಸಮರ್ಥನೆ ಮಾಡಿದಂತಿದೆ. ಸಂಘ ಪರಿವಾರದ ಮೇಲೆ ಕಾಂಗ್ರೆಸ್ ಆರೋಪ ಮಾಡುತ್ತಿರುವುದು ಇದು ಮೊದಲ ಬಾರಿ ಅಲ್ಲ, ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದು ನಾಥುರಾಮ ಗೋಡ್ಸೆ, ಆದರೂ ಗಾಂಧಿಯನ್ನು ಕೊಲೆ ಮಾಡಿದ್ದು ಆರೆಸ್ಸೆಸ್ ಎಂದು ಆರೋಪಿಸಿದ್ದರು. ಈಗ ತನ್ನ ಹಳೆ ಚಾಳಿಯನ್ನು ಮತ್ತೆ ಮುಂದುವರಿಸಿದೆ. ಮುಂಬರುವ ಚುನಾವಣೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಈ ಆರೋಪಗಳನ್ನು ಮಾಡುತ್ತಿದೆ ಎಂದರು.
ರಾಜ್ಯ ತೆಂಗು ನಾರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿ, ಸುಶೀಲ್ ಕುಮಾರ್ ಶಿಂಧೆಯಂತಹ ಮೂರ್ಖ ವ್ಯಕ್ತಿ ಇನ್ನೊಬ್ಬರಿಲ್ಲ. ಅವರು ಕೇವಲ ಗೃಹಮಂತ್ರಿ ಸ್ಥಾನದಲ್ಲಿದ್ದಾರೆಯೇ ಹೊರತು ಅದಕ್ಕೆ ಯೋಗ್ಯರಾಗಿಲ್ಲ. ಆರೆಸ್ಸೆಸ್ ಹೆಸರು ಎತ್ತಲು ಅವರಿಗೆ ಯೋಗ್ಯತೆ ಇಲ್ಲ. ನಮ್ಮ ದೇಶ ಉಳಿಯಲು ಆರೆಸ್ಸೆಸ್ನಂತಹ ಹಿಂದೂ ಸಂಘಟನೆಗಳೇ ಕಾರಣ. ಇದು ಗೊತ್ತಿಲ್ಲದ ಶಿಂಧೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ದೇಶದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಕರಾವಳಿ ಪ್ರಾಧಿಕಾರ ನಿಗಮ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್, ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ, ಜಿಪಂ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಸದಸ್ಯೆ ಗೀತಾಂಜಲಿ ಸುವರ್ಣ, ನಗರಸಭೆ ಸದಸ್ಯರಾದ ಶ್ಯಾಮಲಾ ಸುಂದರ್, ಇಂದಿರಾ, ಯಶ್ಪಾಲ್ ಸುವರ್ಣ ಇದ್ದರು.