ಅತ್ಯಾಚಾರ ಪ್ರಕರಣ: ಬಾಲಕಿಗೆ ಪುನರ್ವಸತಿ ಕೇಂದ್ರದಲ್ಲಿ ರಕ್ಷಣೆ
ಸುಳ್ಯ: ಇತ್ತೀಚೆಗೆ ಸುಳ್ಯದ ಕೊಡಿಯಾಲಬೈಲು ಅಮೈ ಎಂಬಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಗೆ ಜಿಲ್ಲಾ ಪುನರ್ವಸತಿ ಕೇಂದ್ರ ರಕ್ಷಣೆ ಕಲ್ಪಿಸಲಿದೆ.
ಶುಕ್ರವಾರ ಸುಳ್ಯಕ್ಕೆ ಆಗಮಿಸಿದ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಗ್ರೇಸಿ ಗೋನ್ಸಾಲ್ವಿಸ್ ನೇತೃತ್ವದ ತಂಡವು ಬಾಲಕಿಗೆ ಈ ಅಭಯ ನೀಡಿತು.
ಅತ್ಯಾಚಾರಕ್ಕೊಳಗಾದವಳು ಹದಿನೆಂಟು ವರ್ಷದೊಳಗಿನ ಬಾಲಕಿಯದ ಕಾರಣ ಈ ತಂಡವು ಸುಳ್ಯಕ್ಕೆ ಭೇಟಿ ನೀಡಿ ಘಟನೆಯ ಮಾಹಿತಿ ಸಂಗ್ರಹಿಸಿತು. ಅದರಂತೆ ಬಾಲಕಿಯನ್ನು ಭೇಟಿ ಮಾಡಿದ ತಂಡವು ಆಕೆ ಕೆಲಸ ಮಾಡುತ್ತಿದ್ದ ಅಂಗಡಿ, ಆಕೆಯ ಮನೆ, ಆರೋಪಿಯ ಮನೆ, ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆಗೆ ಭೇಟಿ ನೀಡಿತು.
ಬಾಲಕಿಯನ್ನು ಎರಡು ವರ್ಷಗಳ ಕಾಲ ಪುನರ್ವಸತಿ ಕೇಂದ್ರದಲ್ಲಿ ಇರಿಸಿ ಆಕೆಗೆ ರಕ್ಷಣೆ ನೀಡುವುದು ಮತ್ತು ಆಕೆಯ ಶೈಕ್ಷಣಿಕ ಕಾರ್ಯಕ್ಕೆ ವ್ಯವಸ್ಥೆ ಮಾಡುವುದಾಗಿ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಭರವಸೆ ನೀಡಿದರು. ಪರಿವೀಕ್ಷಣೆ ಅಧಿಕಾರಿ ಆಶಾಲತಾ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೀರಬಿದಿರೆ ನಾರಾಯಣ, ವಲಯ ಮೇಲ್ವಿಚಾರಕಿ ಚಂದ್ರಕಲಾ ಈ ತಂಡದಲ್ಲಿದ್ದರು.