ಕಂಕನಾಡಿ: ಶಾಲೆಗೆ ನುಗ್ಗಿ ಕಂಪ್ಯೂಟರ್ ಕಳವು (ಸುದ್ದಿ ಸಂಕ್ಷೇಪ)
ಮಂಗಳೂರು: ಕಂಕನಾಡಿ ಸೇಂಟ್ ಜೋಸೆಫ್ ಪ್ರಾಥಮಿಕ ಶಾಲೆಗೆ ಬೀಗ ಮುರಿದು ನುಗ್ಗಿದ ಕಳ್ಳರು 2 ಕಂಪ್ಯೂಟರ್ ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳ ಮೌಲ್ಯ 34 ಸಾವಿರ ಅಂದಾಜಿಸಲಾಗಿದೆ.
ರೈಲು ಬೋಗಿಯಲ್ಲಿ ಶವ ಪತ್ತೆ
ಮಂಗಳೂರು: ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪಾಲ್ಘಾಟ್ ನಿಂದ ಬಂದ ರೈಲಿನಲ್ಲಿ ಪ್ರಯಾಣಿಕನ ಮೃತದೇಹ ಪತ್ತೆಯಾಗಿದೆ. ಶನಿವಾರ ರಾತ್ರಿ ನಿಂತಿದ್ದ ರೈಲು ಬೋಗಿಗಳನ್ನು ಶುಕ್ರವಾರ ಬೆಳಗ್ಗೆ ಶುಚಿಗೊಳಿಸುವಾಗ ಕೊನೆ ಬೋಗಿಯಲ್ಲಿ ಅಪರಿಚಿತ ವ್ಯಕ್ತಿ ಮೃತದೇಹ ದೇಹ ಪತ್ತೆಯಾಯಿತು. 55 ವರ್ಷ ಪ್ರಾಯ, ಎಣ್ಣೆಕಪ್ಪು ಮೈಬಣ್ಣ, ತುಂಬು ತೋಳು ಬಿಳಿ ಅಂಗಿ, ಬಿಳಿ ಪಂಚೆ. ಎಡಗೈಗೆ ಏಟಾಗಿದೆ. ರೈಲು ಪೊಲೀಸರು ಪ್ರಕರಣ ದಾಖಲಿಸಿದ್ದು, ತಮಿಳ್ನಾಡು ಮೂಲದ ವ್ಯಕ್ತಿ ಆಗಿರಬಹುದು ಎಂದು ಶಂಕಿಸಲಾಗಿದೆ.
ಗೋಡೆ ಬಿದ್ದು ಮಗು ಮೃತ್ಯು
ಸುಳ್ಯ: ಹೊಸದಾಗಿ ಕಟ್ಟಿದ ಗೋಡೆಯೊಂದು ಮಗುಚಿ ಬಿದ್ದು ಅದರಡಿಗೆ ಸಿಲುಕಿ ಮಗುವೊಂದು ಮೃತ ಪಟ್ಟ ಧಾರುಣ ಘಟನೆ ಬೆಳ್ಳಾರೆ ಸಮೀಪದ ಪೆರುವಾಜೆಯಲ್ಲಿ ನಡೆದಿದೆ. ಪೆರುವಾಜೆ ಗ್ರಾಮದ ಬಜೆತ್ತನೆ ಶಶಿಕಾಂತ್ ನಾಯಕ್ ಎಂಬವರ ನಾಲ್ಕೂವರೆ ವರ್ಷದ ಮಗು ಸುಶಾಂತ್ ಮೃತಪಟ್ಟ ದುರ್ದೈವಿ.