ನಾಗರಿಕರ ದೂರು ದುಮ್ಮಾನಕ್ಕೆ ಡಿಸಿ ವೆಬ್ಸೈಟ್
ಮಂಗಳೂರು: ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ನಿರ್ವಹಣಾ ವ್ಯವಸ್ಥೆಯನ್ನು ಜಿಲ್ಲಾ ವೆಬ್ಸೈಟ್ಗೆ ಲಿಂಕ್ ಮಾಡುವ ಮುಖೇನ ನಾಗರಿಕರು ತಮ್ಮ ದೂರುಗಳನ್ನು ಇಂಟರ್ನೆಟ್ ಮೂಲಕ ನೇರವಾಗಿ ದಾಖಲಿಸಬಹುದು ಮತ್ತು ಅದರ ವಿವೇವಾರಿ ಬಗ್ಗೆ ಸಂಬಂಧಿಸಿದ ಮಾಹಿತಿಯನ್ನು ಇಂಟರ್ನೆಟ್ ಮೂಲಕವೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ವ್ಯವಸ್ಥೆಗೆ ಜ.26ರಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲನೆ ನೀಡುವರು.
ನಾಗರಿಕರು ತಮ್ಮ ಅಹವಾಲು/ಕುಂದುಕೊರತೆಯನ್ನು ಇಂಟರ್ನೆಟ್ ಮುಖಏನ ದಾಖಲಿಸುವುದಲ್ಲದೆ, ಅದರ ವಿವಿಧ ಹಂತಗಳಲ್ಲಿ ಪರಿಶೀಲಿಸಬಹುದು. ಈಗಾಗಲೇ ದಾಖಲಿಸಿರುವ ಅರ್ಜಿಯ ಶೀಘ್ರ ವಿವೇವಾರಿ ಕೋರಿ ನೆನಪೋಲೆಗಳನ್ನು ಸಲ್ಲಿಸಬಹುದು.
ಇಂಟರ್ನೆಟ್ನಲ್ಲಿ ಅರ್ಜಿ ದಾಖಲಾದ ಕೂಡಲೇ ಅರ್ಜಿಯನ್ನು ದೂರಿಗೆ ಸಂಬಂಧಿಸಿದ ಇಲಾಖೆಯ ಪ್ರಥಮ ಹಂತದ ಅಧಿಕಾರಿಗಳಿಗೆ ರವಾನಿಸುತ್ತಾರೆ.
ಆ ಅರ್ಜಿ ಅದೇ ಕಚೇರಿಯಲ್ಲಿ ಇತ್ಯರ್ಥಗೊಳ್ಳಬಹುದು ಅಥವಾ ಮುಂದಿನ ಕ್ರಮಕ್ಕಾಗಿ ಅಧೀನ ಕಚೇರಿಗೆ ರವಾನೆಯಾಗಬಹುದು. ಅರ್ಜಿಯ ವಿವೇವಾರಿಯ ವಿವಿಧ ಹಂತದ ಮಾಹಿತಿ ಅರ್ಜಿದಾರನಿಗೆ ವೆಬ್ಸೈಟ್ನಲ್ಲಿ ಸಿಗಲಿದೆ.
ಮಾನಿಟರಿಂಗ್ ಮೇಜು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನಿಟರಿಂಗ್ ಸೆಲ್ ಇರಲಿದೆ. ಈ ಸೆಲ್ನಿಂದಲೇ ಇಂಟರ್ನೆಟ್ ಮೂಲಕ ಬಂದ ಕುಂದುಕೊರತೆಗಳ ಅರ್ಜಿಯನ್ನು ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸುತ್ತಾರೆ.
ಈ ರೀತಿ ರವಾನಿಸಿದ ಅರ್ಜಿಗಳ ಇತ್ಯರ್ಥ ಮತ್ತು ನಾಗರಿಕರಿಂದ ಬಂದ ಅರ್ಜಿಗಳ ಪೈಕಿ ಇತ್ಯರ್ಥವಾಗದೆ ಬಾಕಿ ಇರುವ ಎಲ್ಲ ಹಂತಗಳನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.