ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯ: ವಿವಾದಕ್ಕೆ ಕಾರಣವಾದ ಟಿಪ್ಪು ವೃತ್ತ

Mainashree
Updated On : 26 Jan 2013, 11:53 am

ಸುಳ್ಯ: ಸುಳ್ಯದ ನಾವೂರು ಸರ್ಕಲ್ನಲ್ಲಿ ಸ್ಥಳೀಯರು ನಿರ್ಮಿಸಿದ ಟಿಪ್ಪು ಸುಲ್ತಾನ್ ಹೆಸರಿನ ವೃತ್ತವು ವಿವಾದಕ್ಕೆ ಕಾರಣವಾಗಿ ನಗರ ಪಂಚಾಯಿತಿ ಆಕ್ಷೇಪಿಸಿದ ಮತ್ತು ತಹಸೀಲ್ದಾರ್ ಸ್ಥಳಕ್ಕೆ ಬಂದ ಬಳಿಕ ವೃತ್ತವನ್ನು ತೆರವುಗೊಳಿಸಲಾಯಿತು.
 ಸುಳ್ಯ ನಗರ ವ್ಯಾಪ್ತಿಯ ನಾವೂರು ಎಂಬಲ್ಲಿ ಮೂರು ರಸ್ತೆಗಳು ಸೇರುವಲ್ಲಿ ನಗರ ಪಂಚಾಯಿತಿಯು ವೃತ್ತದಂತೆ ಇರಿಸಿದ್ದ ಕಸದ ತೊಟ್ಟಿಯನ್ನೇ ಬಳಸಿ ಗುರುವಾರ ಸ್ಥಳೀಯರು ವೃತ್ತವೊಂದನ್ನು ನಿರ್ಮಿಸಿ ಬಣ್ಣ ಬಳಿದು ಅದಕ್ಕೆ ಟಿಪ್ಪು ಸುಲ್ತಾನ್ ಹೆಸರು ಬರೆದು ಧ್ವಜ ಹಾಕಿದ್ದರು.
 ಇದು ಕೆಲವರ ಆಕ್ರೋಶಕ್ಕೆ ಕಾರಣವಾಗಿ ಅವರು ಪಂಚಾಯಿತಿಗೆ ದೂರು ನೀಡಿದರು. ಪಂಚಾಯಿತಿಯವರು ಈ ವೃತ್ತ ಅನಧಿಕೃತವಾಗಿರುವುದರಿಂದ ಅದನ್ನು ತೆರವುಗೊಳಿಸಲು ರಕ್ಷಣೆ ನೀಡಬೇಕು ಎಂದು ಪೊಲೀಸರಲ್ಲಿ ಕೇಳಿಕೊಂಡರು.
 ಶುಕ್ರವಾರ ಈ ಸ್ಥಳದಲ್ಲಿ ವೃತ್ತವನ್ನು ಬೆಂಬಲಿಸಿ ನೂರಾರು ಮಂದಿ ಜಮಾವಣೆಗೊಂಡರು. ಸರ್ಕಲ್ ಇನ್ಸ್ಪೆಕ್ಟರ್ ಎಚ್.ವಿ. ಸುದರ್ಶನ್, ಎಸ್.ಐ. ಗಿರೀಶ್ ಸ್ಥಳಕ್ಕೆ ಧಾವಿಸಿದರು.
 ಬಳಿಕ ಸ್ಥಳಕ್ಕೆ ಬಂದ ತಹಸೀಲ್ದಾರ್ ವೈದ್ಯನಾಥ್, ಈ ಅನಧಿಕೃತ ವೃತ್ತ ಊರಿನಲ್ಲಿ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇರುವುದರಿಂದ ಇದನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವಂತೆ ವಿನಂತಿಸಿದರು. ಈ ವೃತ್ತದಿಂದ ಯಾವುದೇ ಸಮಸ್ಯೆಯಿಲ್ಲ. ಯಾರಿಗೂ ತೊಂದರೆಯಾಗುವುದೂ ಇಲ್ಲ. ಹಾಗಾಗಿ ತೆಗೆಸುವುದು ಸರಿಯಲ್ಲ ಎಂದು ನ.ಪಂ. ಸದಸ್ಯರಾದ ಕೆ.ಎಂ. ಮುಸ್ತಾಫ, ಪಿ.ಎ. ಮಹಮ್ಮದ್, ಸ್ಥಳೀಯ ಸಂಘಟನೆಯ ಉಮ್ಮರ್ ಮೊದಲಾದವರು ವಾದಿಸಿದರು.
 ವೃತ್ತವನ್ನು ತೆರವುಗೊಳಿಸಿ ನ.ಪಂ.ನಿಂದ ಅನುಮತಿ ಪಡೆದು ಬೇಕಿದ್ದರೆ ನಿರ್ಮಿಸಿ. ಅದಿಲ್ಲದಿದ್ದರೆ ಅದರಲ್ಲಿರುವ ಹೆಸರನ್ನಾದರೂ ತೆಗೆದು ಬಿಡಿ ಎಂದು ತಹಸೀಲ್ದಾರ್ ಸೂಚಿಸಿದರು. ಇದಕ್ಕೆ ಸ್ಥಳೀಯರು ಒಪ್ಪಲಿಲ್ಲ. ಮುಂದಿನ ನ.ಪಂ. ಸಭೆಯವರೆಗೂ ಇದೇ ರೀತಿ ಇರಲಿ. ಅಲ್ಲಿ ಅನುಮತಿ ಪಡೆಯುತ್ತೇವೆ ಎಂಬ ಸ್ಥಳೀಯರ ವಾದವನ್ನು ತಹಸೀಲ್ದಾರರೂ ಒಪ್ಪಲಿಲ್ಲ. ಇದರಿಂದ ಬಹಳ ಹೊತ್ತು ವಾದ- ವಿವಾದ ನಡೆಯಿತು.
 'ನಾವು ಇದನ್ನು ತೆರವುಗೊಳಿಸಿದರೆ ಇತರ ಕಡೆ ಅನಧಿಕೃತವಾಗಿ ನಿರ್ಮಿಸಿದ ನಿರ್ಮಾಣಗಳನ್ನು ನೀವು ಕೂಡ ತೆರವುಗೊಳಿಸಬೇಕು ಮತ್ತು ಹಾಗೆಂದು ಲಿಖಿತವಾಗಿ ನೀಡಬೇಕು' ಎಂದು ಸ್ಥಳೀಯರು ಹೇಳಿದಾಗ ತಹಸೀಲ್ದಾರ್ ಒಪ್ಪಿ ಅದರಂತೆ ಬರೆದುಕೊಟ್ಟರು. ಬಳಿಕ ವೃತ್ತ ನಿರ್ಮಿಸಿದವರೇ ಅದನ್ನು ತೆರವುಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement