ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಾವಿಗೆ ಉರುಳಿದ ಜೀಪ್: ಚಾಲಕ ಮೃತ (ಸುದ್ದಿ ಸಂಕ್ಷೇಪ)

Mainashree
Updated On : 27 Jan 2013, 11:47 am

ಸುಬ್ರಹ್ಮಣ್ಯ: ಜೀಪ್‌ವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಬಾವಿಗೆ ಉರುಳಿ ಬಿದ್ದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಪಂಜದಲ್ಲಿ ನಡೆದಿದೆ.
 ಪಂಜ ಸಮೀಪದ ಜಳಕದಹೊಳೆ ನಿವಾಸಿ ಚಿನ್ನಪ ಗೌಡ (45) ಮೃತರು. ಪಂಜ ಸಮೀಪದ ಚೀಮುಳ್ಳು ಎಂಬಲ್ಲಿಗೆ ರಾತ್ರಿ ಬಾಡಿಗೆಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ತಿರುವೊಂದರಲ್ಲಿ ಜೀಪು ನಿಯಂತ್ರಣ ತಪ್ಪಿ ಸಮೀಪದಲ್ಲಿದ್ದ ಬಾವಿಗೆ ಉರುಳಿತು. ಸ್ಥಳೀಯರು ಅವರನ್ನು ಬಾವಿಯಿಂದ ಮೇಲಕ್ಕೆತ್ತುವ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿದ್ದು, ದೂರು ದಾಖಲಿಸಿದ್ದಾರೆ. ಮೃತರಿಗೆ ಪತ್ನಿ, ಪುತ್ರ ಇದ್ದಾರೆ.

ಹೊಸ ಕಾರಿನ ಟಯರ್ ಕಳವು
ಮಂಗಳೂರು: ಮನೆಯ ಬಳಿ ನಿಲ್ಲಿಸಿದ್ದ ಹೊಸ ಕಾರಿನ 2 ಟಯರ್‌ನ್ನು ಕಳವು ಮಾಡಿದ ಘಟನೆ ಕಾವೂರಿನಲ್ಲಿ ಶನಿವಾರ ವರದಿಯಾಗಿದೆ. ಇಲ್ಲಿನ ಮಹಾತ್ಮಾಗಾಂಧಿ 3ನೇ ಕ್ರಾಸ್ ನಿವಾಸಿ ರಾಮಚಂದ್ರ ಭಟ್ ಎಂಬವರು ಹೊಸ ಕಾರನ್ನು ಖರೀದಿಸಿದ್ದರು. ಇನ್ನೂ ನಂಬರ್ ಪ್ಲೇಟ್ ಹಾಕಿರಲಿಲ್ಲ. ಅದನ್ನು ತಮ್ಮ ಮನೆಯಂಗಳದ ಸನಿಹದಲ್ಲೇ ನಿಲ್ಲಿಸಿದ್ದರು. ಇದನ್ನು ಗಮನಿಸಿದ ಕಳ್ಳರು ಕಾರಿಗೆ ಜಾಕ್ ಅಳವಡಿಸಿ ಹೊಸ ಟಯರ್‌ನ್ನು ಕಳವು ಮಾಡಿದ್ದಾರೆ. ಇದರ ಮೌಲ್ಯ ರು. 15 ಸಾವಿರ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ರಕ್ತಸ್ರಾವದಿಂದ ಬಾಣಂತಿ ಸಾವು
ಸುಳ್ಯ: ಹೆರಿಗೆ ವೇಳೆ ರಕ್ತ ಸ್ರಾವವುಂಟಾಗಿ ಬಾಣಂತಿಯೊಬ್ಬರು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ. ಸುಳ್ಯ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾದ ಬೋಳಂತಿಯಡ್ಕ ಪೂವಪ್ಪ ಎಂಬವರ ಪತ್ನಿ ಶಾರದಾ ಮೃತರು. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆದ ಬಳಿಕ ರಕ್ತಸ್ರಾವ ಸಂಭವಿಸಿತ್ತು. ಕೂಡಲೇ ಅವರನ್ನು ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರಿಗೆ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಮದುವೆಯಾಗಿತ್ತು. ಶಾರದಾ ಸುಳ್ಯ ಸೂರ್ತಿಲ ಕೊರಗಪ್ಪ ಅಜಿಲರ ಮಗಳು.

ಟೆಂಪೊ ಡಿಕ್ಕಿ: ಬೈಕ್ ಸವಾರಗೆ ಗಾಯ
ಮೂಲ್ಕಿ: ಟೆಂಪೊ ಡಿಕ್ಕಿಯಾಗಿ ಬೈಕ್ ಸವಾರ ತೀವ್ರ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಮೂಲ್ಕಿಯ ಬಪ್ಪನಾಡು ದೇವಳ ಎದುರುಗಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬೈಕ್ ಸವಾರ ಅರುಣ್ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲ್ಕಿಯಿಂದ ಪಡುಬಿದ್ರಿ ಕಡೆಗೆ ಹೋಗುತ್ತಿದ್ದ ಟೆಂಪೊವೊಂದು ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಪಡುಬಿದ್ರಿ ಕಡೆಯಿಂದ ಮೂಲ್ಕಿ ಕಡೆಗೆ ಬರುತ್ತಿದ್ದ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಉಡುಪಿ: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ಆತ್ಯಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಕುಂದಾಪುರದ ಆಸ್ಪತ್ರೆಯಲ್ಲಿ ನಡೆದಿದೆ. ಮೃತರು ಲತಾ ಭೋವಿ (38), ಅವರು ನಾಗೇಶ್ ಬೋವಿ ಎಂಬವರ ಪತ್ನಿ. ಸುಮಾರು 2 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು.
   ಚಿಕಿತ್ಸೆಗಾಗಿ ಅವರನ್ನು ಕುಂದಾಪುರದ ಶ್ರೀಮಾತಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಹಿಂದೆ ಅವರಿಗೆ ತೀರ್ಥಹಳ್ಳಿಯಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗಿರಲಿಲ್ಲ. ಇದೇ ಕಾರಣಕ್ಕೆ ನೊಂದು, ಆಸ್ಪತ್ರೆಯ ತಮ್ಮ ಕೊಠಡಿಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ವ್ಯವಸ್ಥಾಪಕ ವಿಠಲಕುಮಾರ್ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ವಿಟ್ಲೋತ್ಸವ
ವಿಟ್ಲ: ಇಲ್ಲಿನ ಜಾತ್ರೋತ್ಸವ ಆರಂಭಗೊಂಡಿದ್ದು, ಸೋಮವಾರ ಮಹಾ ರಥೋತ್ಸವ ನಡೆಯಲಿದೆ. ಭಾನುವಾರ ಹೂತೇರು ನಡೆಯಲಿದ್ದು,  ವಿಟ್ಲದ ರಥದ ಗದ್ದೆಯಲ್ಲಿ ರಮಾನಾಥ ವಿಟ್ಲ ಅವರ ಸಾರಥ್ಯದಲ್ಲಿ ವಾಸ್ ಆಫ್ ಮಂಗಳೂರು ಇವರಿಂದ ಸಂಗೀತ ನೃತ್ಯ ಕಲಾ ವೈವಿಧ್ಯತೆಗಳ ವಿಟ್ಲೋತ್ಸವ ಅದ್ಧೂರಿಯಾಗಿ  ನಡೆಯಲಿದೆ. ವಿಠಲ್ ಕ್ರಿಯೇಶನ್ ಕ್ಲಬ್ ಮೂಲಕ ಕಳೆದ 18 ವರ್ಷಗಳಿಂದ ನಿರಂತರವಾಗಿ ವಿಟ್ಲ ಮಹಾರಥೋತ್ಸವದ ಮುನ್ನಾ ದಿನ ನಡೆಯುವ ಹೂತೇರಿನಂದು ಸಂಗೀತ ಕಲಾ ರಸಿಕರಿಗೆ ಮುದ ನೀಡುವ ವಿಟ್ಲೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿಶಿಷ್ಟ ಕಲಾ ಪರಿಕಲ್ಪನೆಯ ವೇದಿಕೆಯಲ್ಲಿ, ನಾಡಿನ ಅತಿರಥ ಮಹಾರಥ ಕಲಾವಿದರನ್ನು ಆಹ್ವಾನಿಸಿ, ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಾರಿಯ ವಿಟ್ಲೋತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ಹೆಸರಾಂತ ಗಾಯಕರಾದ ರಾಜೇಶ್, ಜೋಯ್‌ಪೀಟರ್, ಹೇಮಂತ್ ಬೆಂಗಳೂರು, ಅನುರಾಧ ಭಟ್, ಸಂತೋಷ್ ಬೆಂಗಳೂರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ವಿಟ್ಲೋತ್ಸವದಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಸಾಧನೆ, ಸೇವೆಗೈದ ಮಹನೀಯರಿಗೆ ಸನ್ಮಾನ, ವಿಟ್ಲ ವ್ಯಾಪ್ತಿಯ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಕಾರ್ಯಕ್ರಮದ ಸಂಘಟಕ ರಮಾನಾಥ ವಿಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಉದ್ಘಾಟನೆ
ವಿಟ್ಲ: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಕನ್ಯಾನ ಶಾಖೆಯು ಭಾನುವಾರ ಕನ್ಯಾನದ ಶ್ರೀ ಗುರುದೇವ ಕೈಗಾರಿಕಾ ತರಬೇತಿ ಸಮುಚ್ಛಯದಲ್ಲಿ ಉದ್ಘಾಟನೆಯಾಗಲಿದೆ.  ಒಡಿಯೂರು ಪ್ರಧಾನ ಕಚೇರಿಯಿದ್ದು, ಬಿ.ಸಿ. ರೋಡು, ಬಿಜೈ, ಪುತ್ತೂರು, ವಿಟ್ಲ, ಪಂಪ್‌ವೆಲ್‌ಗಳಲ್ಲಿ ಶಾಖೆಗಳನ್ನು ಹೊಂದಿವೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ಸಾಧ್ವಿ ಮಾತಾನಂದಮಯಿ, ವಿಶೇಷ ಆಹ್ವಾನಿತರಾಗಿ ಕನ್ಯಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ. ರಘುರಾಮ ಶೆಟ್ಟಿ, ಗೋವಿಂದ ಭಟ್ ಪಿಲಿಂಗುಳಿ, ಗುಬ್ಯ ಶ್ರೀದತ್ತ ಫೈನಾನ್ಸ್‌ನ ಶ್ರೀಧರ ಶೆಟ್ಟಿ ಗುಬ್ಯ, ಎಂ.ಕೆ. ಮಹಮ್ಮದ್ ಕುಂಞ ಗೋಳಿಕಟ್ಟೆ ಭಾಗವಹಿಸಲಿದ್ದಾರೆ. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಎ. ಸುರೇಶ್ ರೈ, ಉಪಾಧ್ಯಕ್ಷ ತಾರಾನಾಥ ಕೊಟ್ಟಾರಿ, ಪ್ರಧಾನ ವ್ಯವಸ್ಥಾಪಕ ಎಂ. ಉಗ್ಗಪ್ಪ ಶೆಟ್ಟಿ ಹಾಗೂ ಎಲ್ಲಾ ಶಾಖೆಗಳ ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು, ಸದಸ್ಯರು ಭಾಗವಹಿಸಲಿದ್ದಾರೆ.

ರಿಕ್ಷಾ-ಕಾರ್ ಡಿಕ್ಕಿ:ಮಹಿಳೆ ಸಾವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರಿಯಶಾಂತಿ ಎಂಬಲ್ಲಿ ಆಟೊಗೆ ಇಂಡಿಕಾ ಕಾರ್ ಡಿಕ್ಕಿಯಾಗಿ ರಿಕ್ಷಾದಲ್ಲಿದ್ದ ತ್ರೇಸಿಯಮ್ಮ (60) ಸಾವನ್ನಪ್ಪಿದ್ದಾರೆ. ರಿಕ್ಷಾದಲ್ಲಿದ್ದ ಇತರ ಇಬ್ಬರು ಗಂಭೀರಗಾಯಗೊಂಡಿದ್ದಾರೆ. ಇಚಲಂಪಾಡಿ ನಿವಾಸಿ ತ್ರೇಸಿಯಮ್ಮ ನೆಲ್ಯಾಡಿಯ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ರಿಕ್ಷಾದಲ್ಲಿದ್ದ ಸಚಿನ್ (16), ಸಂದೇಶ್ (22), ಇಬ್ಬರು ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿದೆ.
------------------
ವ್ಯಕ್ತಿ ನಾಪತ್ತೆ
ಮಂಗಳೂರು: ಹೊಟೇಲಿಗೆ ಕೆಲಸ ಮಾಡಲು ತೆರಳಿದ ವ್ಯಕ್ತಿ ನಾಪತ್ತೆಯಾದ ಘಟನೆ ಶನಿವಾರ ಬಂದರಿನ ಗೊಲ್ಲರಕೇರಿ ಬಳಿ ನಡೆದಿದೆ. ಪ್ರಭಾಕರ ಹೊಳ್ಳ(49) ಕಳೆದ 13 ವರ್ಷದಿಂದ ಹಂಪನಕಟ್ಟೆಯ ತಾಜ್‌ಮಹಲ್ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಜ.25ರಂದು ಹೊಟೇಲ್‌ಗೆ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಸಹೋದರ ಗಣೇಶ್ ಬಂದರು ಪೊಲೀಸರಿಗೆ ದೂರು ನೀಡಿದ್ದಾರೆ.
ವಾಹನ ಕಳವು
ಮಂಗಳೂರು: ನಾಗರದ ಬಾವುಟಗುಡ್ಡೆಯ ಸಿಟಿ ಸೆಂಟರ್ ಕ್ರಾಸ್ ರಸ್ತೆಯ ಕ್ಯಾಂಟಿನ್ ಬಳಿ ನಿಲ್ಲಿಸಿದ್ದ ಬಜಾಜ್ ಪಲ್ಸರ್ ಬೈಕ್ ಕಳವಾದ ಘಟನೆ ಶನಿವಾರ ವರದಿಯಾಗಿದೆ.
 ಈ ಬಗ್ಗೆ ಸವಾರ ಪಾಂಡೇಶ್ವರ ನಿವಾಸಿ ನಿತಿನ್ ಮೋಹನ್ ಬಂದರು ಪೊಲೀಸರಿಗೆ ದೂರು ನೀಡಿದ್ದು, ಕಳವಾದ ಬೈಕ್‌ನ ಮೌಲ್ಯ ರು. 49 ಸಾವಿರ ಎಂದು ಹೇಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿದ್ಯುತ್ ಕಂಬಕ್ಕೆ ಟೆಂಪೊ ಡಿಕ್ಕಿ
ಉಡುಪಿ: ಇಲ್ಲಿನ ಕಡೆಕಾರು ಗ್ರಾಮದ ಕಾನಂಗಿ ಮಹಾಲಿಂಗೇಶ್ವರ ದೇವಸ್ಥಾನ ಬಳಿ ಮೆಸ್ಕಾಂ ವಿದ್ಯುತ್ ಕಂಬಕ್ಕೆ ಟೆಂಪೋ ಡಿಕ್ಕಿ ಹೊಡೆದು ಇಲಾಖೆಗೆ ನಷ್ಟವನ್ನುಂಟು ಮಾಡಿದ ಘಟನೆ ಶನಿವಾರ ನಡೆದಿದೆ.
  ಮುಂಜಾನೆ 4.25 ಗಂಟೆಗೆ ಉಡುಪಿ ಕಡೆಯಿಂದ ಮಲ್ಪೆಗೆ ತೆರಳುತ್ತಿದ್ದ ವಿಶ್ವಜ್ಯೋತಿ ಎಂಬ ಹೆಸರಿನ ಟೆಂಪೋ ಡಿಕ್ಕಿ ಹೊಡೆದು 3 ಸಿಮೆಂಟ್ ಕಂಬಗಳು ತುಂಡಾಗಿ ಇಲಾಖೆಗೆ ಸುಮಾರು ರು. 30 ಸಾವಿರ ನಷ್ಟ ಉಂಟಾಗಿದೆ. ಅಲ್ಲದೆ, ಪಕ್ಕದ ಅಂಗಡಿ ಕಟ್ಟಡಕ್ಕೆ ಸಹ ಹಾನಿಯಾಗಿದೆ. ಈ ಬಗ್ಗೆ ಮೆಸ್ಕಾಂ ಘಟಕ ಅಧಿಕಾರಿ ಮಾರ್ತಂಡ ಕರಿಯಪ್ಪನವರ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ
ಮಂಗಳೂರು: ಬೋಳೂರಿನ ನ್ಯಾಷನಲ್ ಎಂಬಲ್ಲಿ ಬಬಿತಾ(25)ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ವರದಿಯಾಗಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಒಂದು ವರ್ಷ ಹಿಂದೆಯಷ್ಟೇ ಈಕೆಯ ವಿವಾಹವಾಗಿತ್ತು. ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement