ಸುಬ್ರಹ್ಮಣ್ಯಕ್ಕೆ ಹರಿದು ಬಂದ ಜನಸಾಗರ
3 ದಿನ ಸರ್ಕಾರಿ ರಜೆಯಲ್ಲಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತರ ದಂಡು
ಸುಬ್ರಹ್ಮಣ್ಯ: 3 ದಿನ ಸರ್ಕಾರಿ ರಜೆ ಹಿನ್ನೆಲೆಯಲ್ಲಿ 2 ದಿನಗಳಿಂದ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅಪಾರ ಜನಸಾಗರ ಕಂಡುಬಂದಿದೆ.
ಶುಕ್ರವಾರ ಈದ್ ಮಿಲಾದ್, ಶನಿವಾರ ಗಣರಾಜ್ಯೋತ್ಸವ, ಭಾನುವಾರ ಹೀಗೆ 3 ದಿನ ರಜೆಯಾದ್ದರಿಂದ ಕರಾವಳಿ ಜಿಲ್ಲೆಯ ಸುಬ್ರಹ್ಮಣ್ಯ, ಧರ್ಮಸ್ಥಳ ಇನ್ನಿತರ ಪುಣ್ಯ ಕ್ಷೇತ್ರಗಳಿಗೆ ಭಕ್ತರ ದಂಡು ಹರಿದು ಬಂದಿರುವುದರಿಂದ ಜನ ರೂಮ್ಗಾಗಿ, ಸೇವೆಗಾಗಿ ಪರದಾಟ ಮಾಡಬೇಕಾಯಿತು.
ಸುಬ್ರಹ್ಮಣ್ಯ ಕ್ಷೇತ್ರದ ಎಲ್ಲ ವಸತಿ ಗೃಹ, ಹೋಂಸ್ಟೇಗಳು 1 ವಾರ ಮುಂಚಿತವಾಗಿಯೇ ಬುಕ್ಕಿಂಗ್ ಆಗಿದ್ದು, ಶುಕ್ರವಾರ ರಾತ್ರಿ ಬಂದ ಯಾತ್ರಾರ್ಥಿಗಳು ಪಕ್ಕದ ಸುಳ್ಯ, ಉಪ್ಪಿನಂಗಡಿ ಇನ್ನಿತರ ಕಡೆ ರೂಮ್ಗಾಗಿ ತೆರಳಿದರು.
1500ಕ್ಕೂ ಹೆಚ್ಚು ಆಶ್ಲೇಷಾ ಬಲಿ: ದೇವಸ್ಥಾನದಲ್ಲಿ ಸೇವೆಗಾಗಿ ಸೇವಾಕೌಂಟರ್ನಲ್ಲಿ ಆಶ್ಲೇಷ ಬಲಿ, ನಾಗಪ್ರತಿಷ್ಠೆ ಇನ್ನಿತರ ಸೇವೆಗಳ ಸಂಕಲ್ಪ, ದೇವರ ದರ್ಶನ, ಮಧ್ಯಾಹ್ನದ ಊಟಕ್ಕೆ ಎಲ್ಲದಕ್ಕೂ ಮಾರುದ್ದದ ಸಾಲು ಕಂಡು ಬಂತು. ದೇವಾಲಯದಲ್ಲಿ 1500ಕ್ಕೂ ಮಿಕ್ಕಿ ಆಶ್ಲೇಷ ಬಲಿ ಸೇವೆ ನಡೆಯಿತು. ಕಾಫಿ, ತಿಂಡಿ, ಊಟಕ್ಕಾಗಿ ಸುಬ್ರಹ್ಮಣ್ಯದ ಎಲ್ಲ ಹೊಟೇಲ್ಗಳ ಮುಂದೆ ಸರತಿ ಸಾಲು ಕಂಡುಬಂತು. ಈಗಿರುವ ಪಾರ್ಕಿಂಗ್ ವ್ಯವಸ್ಥೆ ಸಾಕಾಗದೆ ಮಾರ್ಗದ 2 ಬದಿ ವಾಹನ ಪಾರ್ಕಿಂಗ್ ಮಾಡಲಾಯಿತು. ಕೆಲವೊಂದು ಹೊಟೇಲ್ ಹಾಗೂ ಹೊಂಸ್ಟೇಗಳಲ್ಲಿ ನೀರಿನ ಅಭಾವ ತಲೆದೋರಿತು. ವಾರ್ಷಿಕ ಜಾತ್ರೆ ಚಂಪಾಷಷ್ಠಿ ಮಹೋತ್ಸವಕ್ಕೆ ಸೇರಿದಕ್ಕಿಂತಲೂ ಮಿಕ್ಕಿ ಜನಸಾಗರ ಸೇರಿತ್ತು. ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಪ್ರಯಾಣಿಕ ಸಂಖ್ಯೆ ಜಾಸ್ತಿ ಇದ್ದುದರಿಂದ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಯಿತು.