ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದು ಕೆ. ಸೋಮಪ್ಪ ಸುವರ್ಣ ಸಂಸ್ಮರಣೆ,

Lingaraj Badiger
Updated On : 28 Jan 2013, 12:19 pm

ಮೂಲ್ಕಿ: ಸಾಮಾಜಿಕ, ಶೈಕ್ಷಣಿಕ, ಕೃಷಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಾಧನೆಗೈದ ಮಾಜಿ ಶಾಸಕ ಕೆ. ಸೋಮಪ್ಪ ಸುವರ್ಣರ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಗ್ರಂಥಾಲಯ ಶಿಲಾನ್ಯಾಸ ಸಮಾರಂಭವು ಕೆ. ಸೋಮಪ್ಪ ಸುವರ್ಣ ನೆರಳು- ನೆಂಪು ಸಮಿತಿಯ ನೇತೃತ್ವದಲ್ಲಿ 28ರಂದು ಜರಗಲಿದೆ ಎಂದು ರಾಜ್ಯ ವಿಪಕ್ಷ ಮುಖ್ಯ ಸಚೇತಕ, ಸಮಿತಿಯ ಗೌರವಾಧ್ಯಕ್ಷ ಕೆ. ಅಭಯಚಂದ್ರ ಜೈನ್ ತಿಳಿಸಿದರು.
ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್‌ನ ಸಭಾಂಗಣದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 28 ರಂದು ಬೆಳಗ್ಗೆ ಮೂಲ್ಕಿಯ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕೆ. ಸೋಮಪ್ಪ ಸುವರ್ಣರ ಸ್ಮರಣಾರ್ಥ ನಿರ್ಮಿಸಲಿರುವ ಗ್ರಂಥಾಲಯದ ಶಿಲಾನ್ಯಾಸ ಕಾರ್ಯಕ್ರಮ ಜರಗಲಿದ್ದು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಶಿಲಾನ್ಯಾಸಗೈಯಲಿದ್ದಾರೆ ಎಂದರು.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಸುಧಾರಾಣಿ, ಕಾಲೇಜಿನ ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ, ಸಂಚಾಲಕ ಎಚ್.ವಿ. ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಅದೇ ದಿನ ಸಂಜೆ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಜರಗಲಿರುವ ಕೆ. ಸೋಮಪ್ಪ ಸುವರ್ಣರ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದ್ದು, ಹಳೆಯಂಗಡಿಯ ಅತ್ಯುತ್ತಮ ಕೃಷಿಕ ರುಕ್ಮಯ್ಯ ಮೂಲ್ಯ, ಅತ್ಯುತ್ತಮ ಶಿಕ್ಷಕ ಮೂಲ್ಕಿಯ ಕಾರ್ನಾಡಿನ ಗುಂಡಾಲುಗುತ್ತು ಮಹಾಬಲ ಶೆಟ್ಟಿ ಹಾಗೂ ಸಮಾಜ ಸೇವಕ ಇರುವೈಲು ನೂಯಿ ಚಂದು ಪೂಜಾರಿಯವರಿಗೆ ಕೆ. ಸೋಮಪ್ಪ ಸುವರ್ಣ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕೆಪಿಸಿಸಿಯ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಕಸಪಾದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮೂಡುಬಿದಿರೆಯ ಉದ್ಯಮಿ ನಾರಾಯಣ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಸಮಿತಿಯ ಹರಿಕೃಷ್ಣ ಪುನರೂರು, ಪ್ರಮೋದ್ ಸುವರ್ಣ, ಎಚ್.ವಿ. ಕೋಟ್ಯಾನ್, ಚಂದ್ರಶೇಖರ ಸುವರ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement