ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತೆಂಗಿನ ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಸವಾರರ ಸಾವು

Lingaraj Badiger
Updated On : 28 Jan 2013, 12:15 pm

ಬಂಟ್ವಾಳ: ಸವಾರನ ನಿಯಂತ್ರಣ ತಪ್ಪಿದ ಬೈಕ್ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟ ಘಟನೆ ಬ್ರಹ್ಮರ ಕೂಟ್ಲು ಸಮೀಪ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ಬಂಟ್ವಾಳ ಕುರಿಯಾಳ ನಿವಾಸಿಗಳಾದ ಬೈಕ್ ಸವಾರ ಚಂದ್ರಹಾಸ (23) ಹಾಗೂ ಗುರುಪ್ರಸಾದ್(20) ಎಂದು ಗುರುತಿಸಲಾಗಿದೆ. ಚಂದ್ರಹಾಸ ಮತ್ತು ಗುರುಪ್ರಸಾದ್ ಜಾರಂದಗುಡ್ಡೆ ಸಮೀಪದ ಸ್ನೇಹಿತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿ ವಾಪಸ್ ಬ್ರಹ್ಮರಕೂಟ್ಲುವಿಗೆ ಬರುತ್ತಿದ್ದಾಗ ತಡರಾತ್ರಿ 10.30 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ತಿರುವೊಂದರಲ್ಲಿ ಚಂದ್ರಹಾಸನ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಪಕ್ಕದ ತೋಟದಲ್ಲಿದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆ ತೀವ್ರತೆಗೆ ಇಬ್ಬರೂ ಗಂಭೀರ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರಾದರೂ, ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಮಂಗಳೂರು: ಕುಲಶೇಖರ ಚೌಕಿ ನಿವಾಸಿ ಕರುಣಾಕರ ಯಾನೆ ವಾಮನ(48) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ವರದಿಯಾಗಿದೆ. ವಿಪರೀತ ಕುಡಿತದ ಚಟವಿದ್ದ ಈತ ಜೀವನದಲ್ಲಿ ಜುಗುಪ್ಸೆಗೊಂಡು ಈ ಕೃತ್ಯವೆಸಗಿದ್ದಾಗಿ ಹೇಳಲಾಗಿದೆ. ಅಗ್ನಿಶಾಮಕದಳ ಆಗಮಿಸಿ ಈತನ ಶವವನ್ನು ಬಾವಿಯಿಂದ ಮೇಲೆತ್ತಿತು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕನ ರಕ್ಷಣೆ
ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಸಮುದ್ರಕ್ಕಿಳಿದು ನೀರು ಪಾಲಾಗುತ್ತಿದ್ದ ಬಾಲಕನನ್ನು ರಕ್ಷಣಾ ಸಿಬ್ಬಂದಿಗಳು ರಕ್ಷಿಸಿದ ಘಟನೆ ಭಾನುವಾರ ನಡೆದಿದೆ. ಮಂಗಳೂರಿನ ಸುರಭಿ ಪ್ರಶಾಂತ್ ನಗರ ನಿವಾಸಿ ಸೂರಜ್(14)ಸ್ನೇಹಿತನ ಜತೆ ಬೀಚ್ ಉತ್ಸವಕ್ಕೆ ಆಗಮಿಸಿದ್ದ. ಅಲ್ಲಿ ಸಮುದ್ರ ನೀರಿಗೆ ಇಳಿದಾಗ ತೆರೆ ಸೆಳೆದೊಯ್ದಿತು. ತಕ್ಷಣ ತಟದಲ್ಲಿದ್ದ ರಕ್ಷಣಾ ತಂಡ ಈತನನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ ಎಂದು ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.
ಕಳವಾದ ವಾಹನ ಪತ್ತೆ
ವಿಟ್ಲ: ಕುದ್ರೆಬೆಟ್ಟು ಸರ್ವಿಸ್ ಸ್ಟೇಶನ್‌ನಲ್ಲಿ ದುರಸ್ತಿ ಕಾರ್ಯ ನಡೆಸಲು ಇಟ್ಟಿದ್ದ ಪಿಕಪ್ ವಾಹನವನ್ನು ಎರಡು ದಿನಗಳ ಹಿಂದೆ ಕಳವು ಮಾಡಲಾಗಿದ್ದು, ಭಾನುವಾರ ಬೆಳಗ್ಗೆ ಪೆರುವಾಯಿ ಸಮೀಪದ ಮುಚ್ಚಿರಪದವಿನಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ಕಲ್ಲಡ್ಕದಲ್ಲಿ ಸೌಂಡ್ಸ್ ಲೈಟಿಂಗ್ ಕೆಲಸ ನಿರ್ವಹಿಸುತ್ತಿದ್ದ ಪದ್ಮನಾಭ ಎಂಬವರು ಪಿಕಪ್ ವಾಹನವನ್ನು ಕಲ್ಲಡ್ಕ ಕುದ್ರೆಬೆಟ್ಟು ಸರ್ವಿಸ್ ಸ್ಟೇಶನ್‌ನಲ್ಲಿ ಶುಕ್ರವಾರ ದುರಸ್ತಿ ಕಾರ್ಯಕ್ಕೆಂದು ನಿಲ್ಲಿಸಿದ್ದರು. ಶನಿವಾರ ಬೆಳಗ್ಗೆ ಸರ್ವಿಸ್ ಸ್ಟೇಶನ್‌ನಿಂದ ವಾಹನ ನಾಪತ್ತೆಯಾಗಿತ್ತು. ವಾಹನದ ಕೀ ಸರ್ವಿಸ್ ಸ್ಟೇಶನ್‌ನಲ್ಲೇ ಇದ್ದು ವಾಹನ ಮಾತ್ರ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಠಾಣೆಗೆ ವಾಹನದ ಮಾಲಕ ದೂರು ನೀಡಿದ್ದರು. ಭಾನುವಾರ ಬೆಳಗ್ಗಿನ ಜಾವ ಮುಚ್ಚಿರಪದವು ಸಮೀಪದ ಗೋಸಳಮೂಲೆ ಎಂಬಲ್ಲಿ ಪಿಕಪ್ ವಾಹನವೊಂದು ಅನಾಥವಾಗಿ ರಸ್ತೆ ಬದಿಯ ಚರಂಡಿಯಲ್ಲಿ ನಿಲ್ಲಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕಲ್ಲಡ್ಕ ನಿವಾಸಿ ಪದ್ಮನಾಭ ಅವರ ವಾಹನ ಎಂಬುದು ಬಹಿರಂಗಗೊಂಡಿದೆ. ಬಳಿಕ ಪೊಲೀಸರು ಅದನ್ನು ವಶಕ್ಕೆ ಪಡೆದು ಮಾಲಕನಿಗೆ ಹಸ್ತಾಂತರ ಮಾಡಿದ್ದಾರೆ. ಪಿಕಪ್ ವಾಹನವನ್ನು ಯಾರು ಎಗರಿಸಿದ್ದಾರೆ ಎಂಬ ಮಾಹಿತಿ ಇದುವರೆಗೆ ಪತ್ತೆಯಾಗಿಲ್ಲ.
ಬಸ್- ಟೂರಿಸ್ಟ್ ಟೆಂಪೊ ಡಿಕ್ಕಿ: ಮಹಿಳೆ ಗಂಭೀರ
ಮೂಲ್ಕಿ: ಬೆಂಗಳೂರಿನ ಬನ್ನೇರುಘಟ್ಟದ ಟೂರಿಸ್ಟ್ ಟೆಂಪೋ ವಾಹನ ಹಾಗೂ ಬಸ್ ಡಿಕ್ಕಿಯಾಗಿ ಬೆಂಗಳೂರಿನ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರಿನ ರಾಜಾಜಿನಗರ ನಿವಾಸಿ ವರಲಕ್ಷ್ಮೀ ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜ.25ರಂದು ಬೆಂಗಳೂರಿನಿಂದ ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿ ಬಾಡಿಗೆ ಟೂರಿಸ್ಟ್ ಟೆಂಪೊ ಮಾಡಿ ಹೊರಟಿದ್ದು, ಹೊರನಾಡು, ಶೃಂಗೇರಿ ಉಡುಪಿ ಮೂಲಕ ಭಾನುವಾರ ಬೆಳಗ್ಗೆ ಮೂಲ್ಕಿಯಾಗಿ ಕಟೀಲು ಕ್ಷೇತ್ರಕ್ಕೆ ಹೋಗುತ್ತಿದ್ದ ಸಂದರ್ಭ ಕಿಲ್ಪಾಡಿಯ ಕುಬೆವೂರು ತಿರುವು ಬಳಿ ಕಿನ್ನಿಗೋಳಿ ಕಡೆಯಿಂದ ಬರುತ್ತಿದ್ದ ಬಸ್ಸು ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಗಿನ ಮರದಿಂದ ಬಿದ್ದು ಸಾವು
ಹಿರಿಯಡ್ಕ: ಇಲ್ಲಿನ ಬೊಮ್ಮರಬೆಟ್ಟು ಗ್ರಾಮದ ಪಂಚನಬೆಟ್ಟು ಎಂಬಲ್ಲಿ ತೆಂಗಿನಕಾಯಿ ಕೊಯ್ಯಲು ಮರ ಹತ್ತಿದ ವ್ಯಕ್ತಿಯೊಬ್ಬ ಕೆಳಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಮೃತರು ರವಿ ನಾಯ್ಕ (42). ಅವರು ಶನಿವಾರ 11.15 ಗಂಟೆಗೆ ಮನೆ ಸಮೀಪದ ತೆಂಗಿನ ಮರದಿಂದ ಕಾಯಿ ಕೊಯ್ಯಲು ಹತ್ತಿದವರು ಆಕಸ್ಮಿಕವಾಗಿ ಆಯತಪ್ಪಿ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡರು. ತಕ್ಷಣ ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಅಲ್ಲಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಲ್ಲಿಯ ಖರ್ಚುವೆಚ್ಚ ಹೆಚ್ಚಾದ ಕಾರಣ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಂಜೆ 4.30 ಗಂಟೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ರವಿ ನಾಯ್ಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೃತರ ಭಾವ ಶಂಕರ ನಾಯ್ಕ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಘರ್ಷಣೆ
ವಿಟ್ಲ: ಅಡ್ಯನಡ್ಕದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ವಿಟ್ಲ ಬ್ರಹ್ಮಕಲಶೋತ್ಸವ ಸಮಯದಲ್ಲಿ ಒಂದು ಗುಂಪಿನ ವ್ಯಕ್ತಿ ಇನ್ನೊಂದು ಗುಂಪಿನ 'ತಾಗಿದ್ದಾನೆ' ಎಂದು ಹೇಳಲಾಗಿದೆ. ಇಬ್ಬರೂ ಒಂದೇ ಊರಿನವರಾಗಿದ್ದರಿಂದ ಮುಖಾಮುಖಿಯಾದ ಸಂದರ್ಭ ತಾಗಿದ್ದು ಯಾಕೆ ಎಂದು ಪ್ರಶ್ನಿಸಿರುವುದೇ ಈ ವಿಕೋಪಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ಪತ್ನಿಗೆ ಹಲ್ಲೆ: ಪತಿ ಬಂಧನ
ಸುಳ್ಯ: ವಿಪರೀತ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಜಟ್ಟಿಪಳ್ಳದ ಧೃತಿಜಯ (30) ಬಂಧಿತ ಆರೋಪಿ. ನಗರದಲ್ಲಿ ಎಳನೀರು ವ್ಯಾಪಾರ ನಡೆಸುತ್ತಿದ್ದ ಈತ ಕಂಠಪೂರ್ತಿ ಕುಡಿದು ಬಂದು ಪತ್ನಿ ಪುಷ್ಪಾವತಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಪುಷ್ಪಾವತಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಸುಳ್ಯ ಪೊಲೀಸರಿಗೆ ದೂರು ನೀಡಿದ್ದರು. ಕೇಸು ದಾಖಲಿಸಿದ ಪೊಲೀಸರು ಧೃತಿಜಯನನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಂಗ ಬಂಧನ ವಿಧಿಸಲಾಗಿದೆ.
ಕಾರು- ಟೆಂಪೋ ಟ್ರಾವೆಲರ್ ಡಿಕ್ಕಿ: 4 ಮಂದಿಗೆ ಗಾಯ
ಉಪ್ಪಿನಂಗಡಿ: ಧರ್ಮಸ್ಥಳ ಪೆರಿಯಶಾಂತಿ ರಾಜ್ಯ ಹೆದ್ದಾರಿಯ ಕೊಕ್ಕಡ ಸಮೀಪ ಬೋಳದಬೈಲು ಎಂಬಲ್ಲಿ ಟೆಂಪೋ ಟ್ರಾವೆಲರ್ ಮತ್ತು ಕಾರು ಡಿಕ್ಕಿ ಹೊಡೆದು ಟೆಂಪೋ ಟ್ರಾವೆಲರ್‌ನಲ್ಲಿದ್ದ 4 ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಬಿಳೇಕ ಹಳ್ಳಿ ನಂಜಮ್ಮ (40), ಮಹದೇವಮ್ಮ (26), ಅಂಕಿತ(7), ಬಸವರಾಜು ( 31 ) ಗಾಯಗೊಂಡವರು. ಟೆಂಪೋ ಟ್ರಾವೆಲರ್‌ನಲ್ಲಿದ್ದ ಪ್ರಯಾಣಿಕರು ಧರ್ಮಸ್ಥಳಕ್ಕೆ ಯಾತ್ರಾರ್ಥಿಗಳಾಗಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ನಿಯಂತ್ರಣ ತಪ್ಪಿ ಈ ವಾಹನಕ್ಕೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement