ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಾಲ ಕೊಡಲ್ಲ ಅಂದ್ರು ಬೇಷರತ್ ಕ್ಷಮೆಯಾಚಿಸಿದ್ರು

Parashurama
Updated On : 27 Jan 2013, 11:43 am

ಮಂಗಳೂರು: ವಕೀಲರಿಗೆ, ಪೊಲೀಸರಿಗೆ, ಪತ್ರಕರ್ತರಿಗೆ ಸಾಲ ಕೊಡುವುದಿಲ್ಲ...!
ಹೌದು. ಇದು ವಿಚಿತ್ರವೆನಿಸಿದರೂ ಸತ್ಯವಾದ ಸಂಗತಿ. ಸಾಮಾನ್ಯವಾಗಿ ಬಹುತೇಕ ಹಣಕಾಸು ಸಂಸ್ಥೆಗಳು ಅನುಸರಿಸುತ್ತಿರುವ ಅಲಿಖಿತ ನಿಯಮವೂ ಹೌದು.
ಬ್ಯಾಂಕ್ ಸಹಿತ ಹಣಕಾಸು ಸಂಸ್ಥೆಗಳು ವಕೀಲರಿಗೆ, ಪೊಲೀಸರಿಗೆ, ಪತ್ರಕರ್ತರಿಗೆ ಕಪ್ಪು ಪಟ್ಟಿಗೆ ಸೇರಿಸಿವೆ. ಆದರೆ, ಪ್ರಭಾವ ಬಳಸಿ, ವಿಶ್ವಾಸಾರ್ಹತೆ ತೋರಿಸಿದರೆ ಪತ್ನಿ ಹೆಸರಲ್ಲಿ ಸಾಲ ನೀಡಲು ಇಂತಹ ಹಣಕಾಸು  ಸಂಸ್ಥೆಗಳು ಒಪ್ಪುತ್ತವೆ. 'ಹಣಕಾಸು ಸಂಸ್ಥೆಗಳ ಆಂತರಿಕ ನಿಯಮದಂತೆ ನಿಮಗೆ ಸಾಲ ನೀಡುವಂತಿಲ್ಲ' ಎಂದು ಸ್ಥಳೀಯ ಶಾಖೆ ವ್ಯವಸ್ಥಾಪಕರು ಸಾಲ ತೆಗೆದುಕೊಳ್ಳುವವರಿಗೆ ಬಹಿರಂಗವಾಗಿಯೇ ಹೇಳುತ್ತಾರೆ ಎಂದು ಪೊಲೀಸರು, ವಕೀಲರು, ಪತ್ರಕರ್ತರು ಆಗಾಗ ದೂರಿಕೊಳ್ಳುತ್ತಾರೆ.
ಮಂಗಳೂರಿನ ಗೃಹೋಪಯೋಗಿ ಮಳಿಗೆಯಲ್ಲಿ ಫ್ರಿಜ್ ಕೊಳ್ಳಲು ಹೋದ ವಕೀಲರಿಗೆ ಕಂತಿನ ಸಾಲ ನೀಡುವುದಿಲ್ಲ ಎಂದು ಬಜಾಜ್ ಫೈನಾನ್ಸ್ ಸಂಸ್ಥೆ ಸಿಬ್ಬಂದಿ ಹೇಳಿದರು. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಕಂಪನಿ ಕೊನೆಗೆ ಕೋರ್ಟ್ ವಾರಂಟ್ ಬಂದ ಬಳಿಕ, ತನ್ನ ತಪ್ಪೊಪ್ಪಿಕೊಂಡು ವಕೀಲರ ಬಳಿ ಬೇಷರತ್ ಕ್ಷಮೆಯಾಚಿಸಿದ ಸಾಲ ನೀಡಲು ಮುಂದಾದ ಪ್ರಸಂಗ ಇದು.
ಮಂಗಳೂರಿನ ವಕೀಲ ಕುಶಾಲಪ್ಪ ಅವರು ನಗರದ ಕೆ.ಎಸ್.ರಾವ್ ರಸ್ತೆಯ ಗೃಹೋಪಯೋಗಿ ಮಳಿಗೆಯಲ್ಲಿ 2010ರ ನವೆಂಬರ್‌ನಲ್ಲಿ ಫ್ರಿಜ್ ಖರೀದಿಸಲು ಬಂದಿದ್ದರು. ಅಲ್ಲಿ ಬಜಾಜ್ ಫೈನಾನ್ಸ್ ಸಂಸ್ಥೆ ಗೃಹೋಪಕರಣ ಖರೀದಿಗೆ ಸಾಲ ನೀಡುತ್ತದೆ. ವಕೀಲರು ಕಂತಿನ ಸಾಲ ನೀಡಲು ಅರ್ಜಿಯಲ್ಲಿ ಹೆಸರು, ವಿಳಾಸ, ವೃತ್ತಿ ನಮೂದಿಸಿದ್ದರು. ಜತೆಗೆ ಡೌನ್ ಪೇಮೆಂಟ್ ಮಾಡಲೆಂದು ರು. 4.5 ಸಾವಿರ ನಗದನ್ನು ಪಕ್ಕದ ಎಟಿಎಂನಿಂದ ತೆಗೆದುಕೊಂಡು ಬಂದು ಬಜಾಜ್ ಸಂಸ್ಥೆಯ ಸಾಲ ಯೋಜನೆ ಸಹಾಯದಿಂದ ಫ್ರಿಜ್ ಖರೀದಿಗೆ ಮುಂದಾದರು. ಆದರೆ, ಡೌನ್‌ಪೇಮೆಂಟ್ ವೇಳೆ ಮ್ಯಾನೇಜರ್, ವಕೀಲರಿಗೆ ಸಾಲ ನೀಡುವುದಿಲ್ಲ ಎಂದು ಹೇಳಿದರು. ಇದರಿಂದ ಅವಮಾನಿತರಾದ ವಕೀಲ ಕುಶಾಲಪ್ಪ ಸಂಸ್ಥೆಯ ನಿಲುವು ವಿರೋಧಿಸಿ, 'ವಕೀಲರು ಏನು ಕಳ್ಳರೆ? ಸಾಲ ಏಕೆ ನೀಡುವುದಿಲ್ಲ' ಎಂದು ಪ್ರಶ್ನಿಸಿದರು. ಆಗ, ಮ್ಯಾನೇಜರ್ 'ವಕೀಲ ವೃತ್ತಿ ಬದಲು ಬೇರೆ ವೃತ್ತಿ ನಮೂದಿಸಿದರೆ ನೀಡಬಹುದು' ಎಂದು ಸಲಹೆ ನೀಡಿದರು.
ಆದರೆ, ಇದಕ್ಕೆ ಒಪ್ಪದ ಕುಶಾಲಪ್ಪ, 'ತಾವು ಬೇಡಲು ಬಂದಿಲ್ಲ, ವಕೀಲರಿಗೆ ಮರ್ಯಾದೆ ಇದೆ' ಎಂದು ಹೇಳಿ, ಫ್ರಿಜ್ ಅನ್ನೂ ಖರೀದಿಸದೆ ಮನೆಗೆ ವಾಪಸಾದರು. ನಂತರ ವಕೀಲರು ಬಜಾಜ್ ಸಂಸ್ಥೆಗೆ ನೋಟಿಸ್ ಕಳುಹಿಸಿದರು. ಆದರೆ, ಸಂಸ್ಥೆಯಿಂದ ಇದಕ್ಕೆ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.
ಕಂಪನಿ ಕ್ಷಮೆಗೆ ಮನವಿ: ನಂತರ ವಕೀಲ ಕುಶಾಲಪ್ಪ ಮಂಗಳೂರಿನ 2ನೇ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಮಾನಹಾನಿ ಪ್ರಕರಣ ಹಾಕಿ, ಬಜಾಜ್ ಫೈನಾನ್ಸ್ ಕಂಪನಿಯು ಕ್ಷಮೆ ಕೇಳಬೇಕು, ಸಿಬ್ಬಂದಿಗೆ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದರು. ಈ ಅರ್ಜಿಯ ಮೇರೆಗೆ ನ್ಯಾಯಾಲಯವು ಬಜಾಜ್ ಫೈನಾನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ  ಹಾಜರಾಗುವಂತೆ 2011ರಲ್ಲಿ ಸಮನ್ಸ್ ಕಳುಹಿಸಿತು. ಆದರೂ ಇದಕ್ಕೆ ಸಂಸ್ಥೆಯಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ನಂತರ ನ್ಯಾಯಾಲಯವು 2012ರ ಡಿಸೆಂಬರ್‌ನಲ್ಲಿ ವಾರಂಟ್ ಜಾರಿ ಮಾಡಿತು.
ರಾಜಿಗೆ ಬಂದರು: ಬಜಾಜ್ ಫೈನಾನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ವಾರಂಟ್ ತಲುಪಿದಾಗ, ರಾಜಿಯಾಗಿ ಪ್ರಕರಣ ಇತ್ಯರ್ಥಪಡಿಸುವಂತೆ ಸಂಸ್ಥೆಯ ಅಧಿಕಾರಿಗಳು ಒಬ್ಬೊಬ್ಬರಾಗಿ ಬಂದು ವಕೀಲರ ದುಂಬಾಲು ಬೀಳತೊಡಗಿದರು. ಕೊನೆಗೆ 2013ರ ಜ.7ರಂದು ಅಧಿಕಾರಿಗಳು ವಕೀಲರ ಬಳಿಗೆ ಬಂದು ಬೇಷರತ್ ಕ್ಷಮೆ ಕೇಳಿದರು. ಅಷ್ಟೇ ಅಲ್ಲ ಬೇಕಾದಷ್ಟು ಸಾಲ ನೀಡುವುದಾಗಿ ಹೇಳಿದರು. ನಂತರ ಬಜಾಜ್ ಸಂಸ್ಥೆ ಕ್ಷಮಾಪಣೆ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಿದ ಬಳಿಕ ವಕೀಲ ಕುಶಾಲಪ್ಪ ಕೇಸ್ ವಾಪಸ್ ಪಡೆದರು. ಈ ಪತ್ರವನ್ನು ಕುಶಾಲಪ್ಪ ಬಾರ್ ಆಸೋಸಿಯೇಶನ್‌ಗೆ ಇದರ ಪ್ರತಿ ನೀಡಿದರು.
- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments