ಸುಳ್ಯ: ಎಲ್ಲೆಲ್ಲೂ ನೀರ ಹಾಡು.. ಕರೆಂಟಿಲ್ಲದಿದ್ದರೆ ಮಾತ್ರ ಪಾಡು
ಸುಳ್ಯ: ಬಿರುಬೇಸಗೆ ಮುಂದಡಿಯಿಟ್ಟಿದೆ. ಇದರ ಜೊತೆಗೇ ಕುಡಿಯುವ ನೀರು ಸಮಸ್ಯೆಯೂ ಆರಂಭಗೊಂಡಿದೆ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.
ಸುಳ್ಯ ನಗರದ ನೀರಿನ ಮೂಲ ಪಯಸ್ವಿನಿ. ಸುಳ್ಯದ ಪಾಲಿಗೆ ಪಯಸ್ವಿನಿ ಜೀವದಾಯಿನಿ. ಅದು ಬಿಟ್ಟರೆ ಬೋರ್ವೆಲ್ಗಳೇ ನೀರಿಗಾಸರೆ. ಆದರೆ ಮುಖ್ಯ ಸಮಸ್ಯೆಯಿರುವುದು ಕರೆಂಟಿನದ್ದು.
ಮಡಿಕೇರಿಯಲ್ಲಿ ಹುಟ್ಟಿ ಸುಳ್ಯ ನಗರದ ಮೂಲಕ ಹಾದು ಕಾಸರಗೋಡು ಸೇರುವ ಪಯಸ್ವಿನಿ, ನಗರದ ಪಾಲಿಗೆ ಮುನಿದ ಉದಾಹರಣೆಗಳಿಲ್ಲ. ಆಕೆಯದ್ದು ಯಾವತ್ತೂ ತುಂಬಿದ ಒಡಲು. ಹರಿವ ಅಷ್ಟೂ ಕಡೆ ನೀರ ಹಾಡು.
ಸುಳ್ಯ ನಗರದಲ್ಲಿ ಇಪ್ಪತ್ತಕ್ಕೂ ಅಧಿಕ ಬೋರ್ವೆಲ್ಗಳಿವೆ.. ಅವುಗಳಿಂದ ನೀರೆತ್ತಿ ನಗರಕ್ಕೆ ಪೂರೈಕೆ ಮಾಡಲಾಗುತ್ತದೆ. ಇದರಲ್ಲಿ ಕೆಲಮೊಮ್ಮೆ ನೀರಿನ ಪ್ರಮಾಣ ಕಡಿಮೆಯಾಗುತ್ತದೆಯಾದರೂ ತೀರಾ ಅಪಾಯಕಾರಿಯಷ್ಟಲ್ಲ.
ನಗರದ ಕಲ್ಲುಮುಟ್ಲು ಎಂಬಲ್ಲಿ ಪಂಪ್ಹೌಸ್ ಮತ್ತು ಶುದ್ಧೀಕರಣ ಘಟಕಗಳಿವೆ. ನಗರದ ಸರ್ವ ಜನತೆಗೆ ನೀರು ಪೂರೈಸುವ ಶಕ್ತಿ ಈ ಮೂಲಗಳಾಗಿವೆ. ಆದರೆ ಅಗಾಗ ಕೈ ಕೊಡುವ ಕರೆಂಟ್, ಕೆಟ್ಟು ಹೋಗುವ ಯಂತ್ರಗಳಿಂದಾಗಿ ಮಾತ್ರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಕೆಲಮೊಮ್ಮೆ ಗಂಟೆಗಟ್ಟಲೆ ವಿದ್ಯುತ್ ನಾಪತ್ತೆಯಾದರೆ 'ಜಲಪಾತ್ರೆ' ಬರಿದು.
ಇದುವರೆಗೆ ಇಲ್ಲಿ ನೀರಿಗಾಗಿ ಹಾಹಾಕಾರವೆದ್ದ ಉದಾಹರಣೆಗಳಿಲ್ಲ. ತಾಂತ್ರಿಕ ಸಮಸ್ಯೆಯಿಂದ ಕೆಲವು ಬಾರಿ ವ್ಯತ್ಯಯ ಉಂಟಾದಾಗ ಟ್ಯಾಂಕರ್ ಮೂಲಕ ನೀರು ಪೂರೈಕೆಯಾದ ಸಂಗತಿಗಳುಂಟು. ನಗರ ಪಂಚಾಯಿತಿ ಈಗಲೂ ಮುಂಜಾಗರೂಕತಾ ಕ್ರಮವಾಗಿ ಇದನ್ನೇ ನೆಚ್ಚಿಕೊಂಡಿದೆ.
ನೀರಿನತ್ತ ಲಕ್ಷ್ಯ: ಸುಳ್ಯ ನಗರಕ್ಕೆ 2007 -08 ರ ಸಾಲಿನಲ್ಲಿ ಎಸ್.ಎಫ್.ಸಿ ಯೋಜನೆಯಲ್ಲಿ ಸುಮಾರು ರು. 2 ಕೋಟಿ ಮಂಜೂರಾಗಿತ್ತು. ಈ ಪೈಕಿ ರು. 52 ಲಕ್ಷ ವೆಚ್ಚದಲ್ಲಿ ಕುರುಂಜಿ ಗುಡ್ಡೆಯಲ್ಲಿ ಬೃಹತ್ ಟ್ಯಾಂಕ್ ನಿರ್ಮಿಸಲಾಗಿತ್ತು.
ಸುಳ್ಯ ನಗರದಲ್ಲೊಂದು ವೆಂಟೆಂಡ್ ಡ್ಯಾಂ ಹಲವು ವರ್ಷಗಳ ಬೇಡಿಕೆ. ಕಲ್ಲುಮುಟ್ಲು ಎಂಬಲ್ಲಿ ಇದಕ್ಕಾಗಿ ಜಾಗ ಗುರುತಿಸಿ ರು. 2.30 ಲಕ್ಷ ನ.ಪಂ. ಪಾವತಿಸಿಯೂ ಆಗಿತ್ತು (ಈ ಕಿಂಡಿ ಅಣೆಕಟ್ಟಿಗೆ ಕೇರಳ ಸರ್ಕಾರದಿಂದ ಆಕ್ಷೇಪ ವ್ಯಕ್ತವಾದುದು ಬೇರೆಯೇ ಕಥೆ) ಆದರೆ ಇದುವರೆಗೆ ಈ ಕುರಿತು ಪ್ರಗತಿಯಾಗಿಲ್ಲ.
ಪಯಸ್ವಿನಿಯಲ್ಲಿ ನೀರು ಕಡಿಮೆಯಾಗುವ ಸೂಚನೆ ಬಂದಾಗ ಮರಳು ಚೀಲ ಸೇರಿಸಿ ನೀರು ಪಡೆಯುವ ಪ್ರಕ್ರಿಯೆ ಇಲ್ಲಿನ ಪಾಲಿನ 'ಅಣೆಕಟ್ಟು'
ಗ್ರಾಮೀಣ ಪ್ರದೇಶಗಳಲ್ಲಿ.
ಸಂಪಾಜೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಳೆದ ಹಲವು ದಿನಗಳಿಂದ ಇತ್ತು.. ಇದಕ್ಕೆ ಮುಖ್ಯ ಕಾರಣ ಸೂಕ್ತ ವಿದ್ಯುತ್ ಪೂರೈಕೆ ಆಗದಿರುವುದು. ದಿನಂ ಪ್ರತಿ ಚಾಲು ಆಗಿರಬೇಕಾದ ವಿದ್ಯುತ್ ಪಂಪ್ ವೋಲ್ಟೇಜ್ ಸಮಸ್ಯೆಯಿಂದಾಗಿ ರನ್ ಆಗುತ್ತಿಲ್ಲ. ಈ ಪರಿಣಾಮ ಕುಡಿಯುವ ನೀರು ಟ್ಯಾಂಕ್ ಸಂಪೂರ್ಣ ಬತ್ತಿಹೋಗಿದೆ. ಇದರಿಂದ ನೀರಿನ ಕ್ಷಾಮ ತಲೆತೋರಿದೆ. ನೀರು ಪೂರೈಕೆ ಆಗದೇ ಇರುವ ಹಿನ್ನಲೆಯಲ್ಲಿ ಸಂಪಾಜೆ ಗ್ರಾಮದ ದಂಡಕಜೆ ಸಹಿತ ಕೆಲವು ಕಾಲೊನಿಗಳ ಜನರು ಬವಣೆ ಪಡುತ್ತಿದ್ದು ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಪಿಕ್-ಅಪ್ನಲ್ಲಿ ಬ್ಯಾರಲ್ ಮೂಲಕ ನೀರು ಪೂರೈಕೆಯನ್ನು ಮಾಡಲಾಗುತ್ತದೆ.
ಉಬರಡ್ಕ ಗ್ರಾಮದ ಕುತ್ತಮೊಟ್ಟೆ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಸುಮಾರು ಕುಟುಂಬಗಳಿದ್ದು ಇಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉದ್ಬವವಾಗಿದೆ. ಈ ಬಗ್ಗೆ ಅಲ್ಲಿನ ನಿವಾಸಿಗಳು ತಾಲೂಕು ಅಧಿಕಾರಿಗಳು, ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಆದರೂ ಈಡೇರಿಲ್ಲ ಎಂದು ಅಲ್ಲಿನ ನಿವಾಸಿಗಳು ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದು ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ.
ಅಜ್ಜಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಾವರ ಪೇಟೆಗೆ ಪೂರೈಕೆ ಮಾಡುವ ಪಂಪ್ ಕೈಕೊಟ್ಟಿದ್ದು, ಇದು ದುರಸ್ತಿ ಆಗದೇ ಇರುವ ಹಿನ್ನಲೆಯಲ್ಲಿ ಕೆಲವು ದಿನಗಳಿಂದ ಪೇಟೆಯಲಿ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ.
ಗುತ್ತಿಗಾರು ಗ್ರಾಮ ವ್ಯಾಪ್ತಿಯ ಮಚ್ಚಿನಡ್ಕ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈಗಾಗಲೇ ಅಲ್ಲಿನ ನಿವಾಸಿಗಳು ಪಂಚಾಯತ್ ಎದುರು ಖಾಲಿ ಕೊಡ ಪ್ರದರ್ಶನ ಮಾಡಿದ್ದಾರೆ.
ನೆಲ್ಲೂರು ಕೆಮ್ರಾಜೆ ವ್ಯಾಪ್ತಿಯ ನಾರ್ಣಕಜೆ ಪರಿಶಿಷ್ಟ ಜಾತಿ ಕಾಲೋನಿ ಪ್ರದೇಶದಲ್ಲಿ ಈ ಹೀಂದೆ ಮಾಡಲಾದ ಟ್ಯಾಂಕ್ ಸರಿಯಿಲ್ಲದೇ ಆ ಟ್ಯಾಂಕ್ನಲ್ಲಿ ನೀರು ಶೇಖರಿಸಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿಯೂ ಕುಡಿಯುವ ನೀರು ಕೊರತೆ ಎದುರಾಗಿದೆ.