ಎಸ್‌ಸಿ,ಎಸ್‌ಟಿ ಕಾಲನಿ ಪಟ್ಟಿ ನೀಡಲು ಪೊಲೀಸರಿಗೆ ಸೂಚನೆ
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್‌ನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎಸ್‌ಸಿ, ಎಸ್‌ಟಿ ಕಾಲನಿ ಮನೆಗಳ ಪಟ್ಟಿ ನೀಡುವಂತೆ ಡಿಸಿಪಿ ಧರ್ಮಯ್ಯ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭಾನುವಾರ ಕಮಿಷನರ್ ಕಚೇರಿಯಲ್ಲಿ ನಡೆದ ಎಸ್‌ಸಿ ಎಸ್‌ಟಿ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಸಿ ಎಸ್‌ಟಿ ಕಾಲನಿಗಳಲ್ಲಿ ನಿತ್ಯ ರಾತ್ರಿ ಪೊಲೀಸರು ಗಸ್ತು ನಿರ್ವಹಿಸಬೇಕು. ಬೀಟ್ ಪುಸ್ತಕದಲ್ಲಿ ಭೇಟಿ ನೀಡಿದ ಬಗ್ಗೆ ನಮೂದಿಸಬೇಕು. ಸ್ಥಳೀಯರನ್ನು ಮಾತನಾಡಿಸಿದರೆ ಉತ್ತಮ ಎಂದು ಹೇಳಿದರು.
ವಾಮಂಜೂರಿನಲ್ಲಿ ದಲಿತ ಯುವತಿಗೆ ವಂಚಿಸಿದ ಆರೋಪದಲ್ಲಿ ಆರೋಪಿಗಳನ್ನು ಬಂಧಿಸಿಲ್ಲ ಎಂಬ ಅಶೋಕ ಕೊಂಚಾಡಿ ಆರೋಪಿಸಿದಾಗ ತನಿಖೆ ಮಾಹಿತಿ ನೀಡಿದ ಬಜ್ಪೆ ಇನ್ಸ್‌ಪೆಕ್ಟರ್ ದಿನಕರ ಶೆಟ್ಟಿ, ಒಬ್ಬ ಆರೋಪಿಗೆ ಜಾಮೀನು ಸಿಕ್ಕಿದೆ. ಇನ್ನೊಬ್ಬನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.
ಘಟನೆ ನಡೆದು 2 ತಿಂಗಳಾದರೂ ಸರಿಯಾದ ಕ್ರಮ ಜರುಗಿಸಿಲ್ಲ ಎಂಬ ಅಶೋಕ್ ಆರೋಪ ನಿರಾಕರಿಸಿದ ಧರ್ಮಯ್ಯ, ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಆರೋಪಿಯೊಬ್ಬ ಜಾಮೀನು ಪಡೆದ ವಿಚಾರ ನ್ಯಾಯಾಲಯಕ್ಕೆ ಸಂಬಂಧಿಸಿದ್ದು. ಸ್ವಲ್ಪ ವಿಳಂಬವಾದರೂ ಉಳಿದ ಆರೋಪಿಯ ಬಂಧನ ಸಾಧ್ಯ ಎಂದು ಹೇಳಿದರು.
ಮಾಧ್ಯದವರಿಗೆ ಸೂಚನೆ ನೀಡಿ: ದಲಿತ ಯುವತಿ ವಂಚನೆ ಪ್ರಕರಣದಲ್ಲಿ ಕೆಲವು ಮಾಧ್ಯಮಗಳಲ್ಲಿ ಯುವತಿ ಹೆಸರು ಹಾಕಲಾಗಿದೆ. ಇದು ಸರಿಯಲ್ಲ. ಮಾಧ್ಯಮದವರಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ದಲಿತ ಮುಖಂಡ ಕೃಷ್ಣಪ್ಪ ಕೊಂಚಾಡಿ ಆಗ್ರಹಿಸಿದರು.
ಈ ಕುರಿತು ಪತ್ರಕರ್ತರ ಸಂಘಕ್ಕೆ ದೂರು ನೀಡಬಹುದು. ತಾವೂ ಮಾಧ್ಯಮದವರಿಗೆ ವಿನಂತಿ ಮಾಡುವುದಾಗಿ ಧರ್ಮಯ್ಯ ಹೇಳಿದರು.
ಪತಿ ಮಾಡಿದ ಪರಸಂಗಾತಿ ವಿರುದ್ಧ ದೂರು ನೀಡಿದರೂ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ತನ್ನನ್ನು ಹಾಗೂ ತನ್ನ ಪತಿಯನ್ನು ಠಾಣೆಗೆ ಕರೆಸಿ ರಾಜಿ ಮಾತುಕತೆ ನಡೆಸಲಾಗಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದರು. ಆಕೆಯನ್ನೂ ಕರೆಸಿ ಎಚ್ಚರಿಕೆ ನೀಡಲಾಗುವುದು ಎಂದು ಧರ್ಮಯ್ಯ ತಿಳಿಸಿದರು. ಡಿಸಿಪಿ ಮುತ್ತೂರಾಯ ಹಾಜರಿದ್ದರು.