ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಟ್ಟಡ ಕಾಮಗಾರಿ ವೇಳೆ ಭೂಕುಸಿತ: ಕಾರ್ಮಿಕ ದುರ್ಮರಣ

Lingaraj Badiger
Updated On : 29 Jan 2013, 12:04 pm

ಬಂಟ್ವಾಳ: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಉಂಟಾದ ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿ ಕೂಲಿ ಕಾರ್ಮಿಕ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಸೋಮವಾರ ಬಿ.ಸಿ. ರೋಡ್‌ನಲ್ಲಿ ನಡೆದಿದೆ.
ಕಕ್ಕೆಪದವು ನಿವಾಸಿ ರಾಮಣ್ಣ ಪೂಜಾರಿ ಎಂಬವರ ಪುತ್ರ ಶರತ್ (22) ಮೃತರು. ಬಿ.ಸಿ.ರೋಡ್‌ನ ಚಂಡಿಕಾ ಪರಮೇಶ್ವರಿ ದೇವಸ್ಥಾನ ಮುಂಭಾಗ ನಿರ್ಮಾಣಗೊಳ್ಳುತ್ತಿರುವ ಸಭಾಭವನ ಕಾಮಗಾರಿ ಸ್ಥಳದಲ್ಲಿ ಈ ಅವಘಡ ಸಂಭವಿಸಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದುದೇ ಘಟನೆಗೆ ಕಾರಣ ಎನ್ನಲಾಗಿದೆ.
ಘಟನೆ ವಿವರ: ಇಲ್ಲಿನ ಚಂಡಿಕಾ ಪರಮೇಶ್ವರಿ ದೇವಸ್ಥಾನದ ಮುಂಭಾಗ ನೂತನ ಸಭಾಭವನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕುಸಿತದ ಭೀತಿಯಲ್ಲಿರುವ ಚಂಡಿಕಾ ಪರಮೇಶ್ವರಿ ದೇವಸ್ಥಾನ ಆವರಣಕ್ಕೆ ತಡೆಗೋಡೆ ನಿರ್ಮಿಸುವ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. ಐವರು ಕಾರ್ಮಿಕರು ಮಧ್ಯಾಹ್ನ ಊಟ ಮುಗಿಸಿ ಕೆಲಸ ಆರಂಭಿಸಿದ್ದರು. 2.30ರ ವೇಳೆಯಲ್ಲಿ ತಡೆಗೋಡೆಗೆ ಪಿಲ್ಲರ್ ಹಾಕುವ ಕಾರ್ಯ ಹಾಗೂ ಕಾಂಕ್ರಿಟ್ ಉದ್ದೇಶಕ್ಕಾಗಿ ಹಲಗೆ ಬಡಿಯುತ್ತಿದ್ದ ವೇಳೆ ಹಠಾತ್ತನೆ ಬರೆ ಕುಸಿದು ಶರತ್ ಮಣ್ಣಿನಡಿ ಹೂತುಹೋದ.
ಅಗ್ನಿಶಾಮಕದಳ, ಬಂಟ್ವಾಳ ಪೊಲೀಸರು ಹಾಗೂ ನಾಗರಿಕರು ಸುಮಾರು ಒಂದು ಗಂಟೆ ಕಾಲ ನಿರಂತರ ಶ್ರಮವಹಿಸಿ ಶರತ್‌ನನ್ನು ಮಣ್ಣಿನೆಡೆಯಿಂದ  ಹೊರಗೆಳೆದರಾದರೂ ಆ ವೇಳೆಗಾಗಲೇ ಶರತ್ ಮೃತಪಟ್ಟಿದ್ದ.
ರಕ್ಷಣಾ ಕಾರ್ಯ: ಸುದ್ದಿ ತಿಳಿಯುತ್ತಿದ್ದಂತೆ ಬಂಟ್ವಾಳ ನಗರ ಪೊಲೀಸರು, ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ದೌಡಾಯಿಸಿ ನಾಗರಿಕರ ಸಹಕಾರದೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಕಬ್ಬಿಣದ ಪಿಲ್ಲರ್ ಪಕ್ಕದಲ್ಲಿ ಶರತ್ ಹೊಂಡದಲ್ಲೇ ನಿಂತಿದ್ದ ವೇಳೆ ಹಠಾತ್ ಮಣ್ಣು ಕುಸಿತದಿಂದಾಗಿ ಆತನ ಕಾಲು ಪಿಲ್ಲರ್ ಸೆರೆಯಲ್ಲಿ ಸಿಲುಕಿಕೊಂಡಿತ್ತು. ಕಾರ್ಯಾಚರಣೆಯಿಂದ ಆತನನ್ನು ಹೊರತೆಗೆದು ತಕ್ಷಣ ಆಸ್ಪತ್ರೆಗೆ ಸಾಗಿಸಲು 108 ಅಂಬ್ಯುಲೆನ್ಸ್‌ಗಾಗಿ ಹುಡುಕಾಟ ನಡೆಸಲಾಯಿತಾದರೂ, ತಕ್ಷಣಕ್ಕೆ ಸಿಗದ ಹಿನ್ನೆಲೆಯಲ್ಲಿ ಬಳಿಕ ನಗರ ಠಾಣಾಧಿಕಾರಿ ಜೀಪ್‌ನಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆ ವೇಳೆಗಾಗಲೇ ಶರತ್ ಮೃತಪಟ್ಟಿದ್ದ ಎಂದು ಹೇಳಲಾಗಿದೆ.
ಘಟನಾ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನಸ್ತೋಮ ನೆರೆದಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಂಟ್ವಾಳ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ, ನಗರ ಠಾಣಾಧಿಕಾರಿ ಶೇಖರ್, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಇದ್ದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಶರತ್ ಹಿರಿ ಮಗ: ಕಕ್ಕೆಪದವು ಮಿತ್ತೇರಿಪದವು ನಿವಾಸಿ ರಾಮಣ್ಣ ಹಾಗೂ ಭವಾನಿ ದಂಪತಿಯ  ಮೂವರು ಮಕ್ಕಳ ಪೈಕಿ ಶರತ್ ಮೊದಲಿನವ. ಇಬ್ಬರು ಸಹೋದರಿಯರಾದ ರೇಖಾ ಮತ್ತು ಸುಮಿತ್ರ ವಿದ್ಯಾರ್ಥಿಗಳು. 7ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಹೊಂದಿದ್ದ ಶರತ್ ಕಳೆದ ಮೂರು ವರ್ಷಗಳಿಂದ ಸೆಂಟ್ರಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದ. ಈತನ ಚಿಕ್ಕಮ್ಮನ ಮಗ ನಿತೇಶ್ ಈತನ ಜತೆಯಲ್ಲೇ ಕೆಲಸ ನಿರ್ವಹಿಸಿದ್ದು, ದುರ್ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ.
108ರ ವಿರುದ್ಧ ಆಕ್ರೋಶ: ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ವಾಹನಕ್ಕಿಂತ ಮುಂಚಿತವಾಗಿಯೇ ಸ್ಥಳಕ್ಕೆ ಬಂದಿದ್ದ 108 ಆರೋಗ್ಯ ರಕ್ಷಾ ಕವಚ ಮಣ್ಣಡಿಯಿಂದ ಶರತ್‌ನನ್ನು ಹೊರಗೆಳೆದ ಬಳಿಕ ನಾಪತ್ತೆಯಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ, ನಾಗರಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶರತ್‌ನನ್ನು ಆಸ್ಪತ್ರೆಗೆ ಸಾಗಿಸಲೆಂದು ಎತ್ತಿಕೊಂಡು ಬಂದರಾದರೂ ಆಂಬ್ಯುಲೆನ್ಸ್ ನಿರ್ಗಮಿಸಿತ್ತು. ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಯಿತು. ಸರ್ಕಾರಿ ಆಸ್ಪತ್ರೆಗೆ ತೆರಳಿದ ಆಕ್ರೋಶಿತರು 108 ಆಂಬುಲೆನ್ಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.


108ರಲ್ಲಿ ಮೃತದೇಹ ಸಾಗಿಸುವಂತಿಲ್ಲ...
'ಮಧ್ಯಾಹ್ನ 2.58ಕ್ಕೆ ಅವಘಡ ನಡೆದ ಸುದ್ದಿ ನಮಗೆ ತಿಳಿಯಿತು. 3.03ಕ್ಕೆ ನಾವು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ. ಸ್ಥಳ ಪರಿಶೀಲನೆ ನಡೆಸಿದಾಗ, ಮಣ್ಣಿನಡಿಗೆ ಸಿಲುಕಿದ ವ್ಯಕ್ತಿ ಬದುಕುವ ಬಗ್ಗೆ ಅನುಮಾನ ಮೂಡಿತು. ಸುಮಾರು ಅರ್ಧ ತಾಸಿನ ಬಳಿಕ ಮಣ್ಣಿನಡಿ ಸಿಲುಕಿದ್ದ ವ್ಯಕ್ತಿ ಬದುಕುವ ಸಾಧ್ಯತೆಯೇ ಇಲ್ಲ ಎಂಬುದನ್ನು ಅರಿತು ನಮ್ಮ ಮೇಲಧಿಕಾರಿಗಳಿಗೆ ಮಾಹಿತಿ ಕೊಟ್ಟೆವು. ಆರೋಗ್ಯ ರಕ್ಷಾ ಕವಚ 108 ಅಂಬ್ಯುಲೆನ್ಸ್‌ನ ನಿಯಮದಂತೆ ಮೃತದೇಹವನ್ನು ನಮ್ಮ ವಾಹನದಲ್ಲಿ ಸಾಗಿಸುವಂತಿಲ್ಲ. ಹಾಗಾಗಿ ನಾವು ಮೇಲಧಿಕಾರಿಗಳ ಸೂಚನೆಯಂತೆ ಸ್ಥಳದಿಂದ ನಿರ್ಗಮಿಸಿದ್ದೇವೆಯೇ ಹೊರತು ಬೇಜವಾಬ್ದಾರಿಯಿಂದಲ್ಲ. ಶರತ್ ಘಟನಾ ಸ್ಥಳದಲ್ಲಿ ಉಸಿರುಗಟ್ಟುವಿಕೆಯಿಂದ ಮೃತಪಟ್ಟಿರುವುದನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳೂ ದೃಢೀಕರಿಸಿದ್ದಾರೆ ಎಂದು ಆಂಬ್ಯುಲೆನ್ಸ್ ಸಿಬ್ಬಂದಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ತಪ್ಪಿದ ಭಾರಿ ಅನಾಹುತ
ಸೋಮವಾರ ಸೆಂಟ್ರಿಂಗ್ ಕಾಮಗಾರಿಯ ಕಾರ್ಮಿಕರು ಮಾತ್ರ ಕೆಲಸ ನಿರತರಾಗಿದ್ದರು. ನಿತ್ಯವೂ ಇದೇ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಾರ್ ಬೆಂಡಿಂಗ್ ಕಾರ್ಮಿಕರು ಸೋಮವಾರ ರಜೆಯಲ್ಲಿ ತೆರಳಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಅಲ್ಲದೆ, ಅವಘಡ ಸಂಭವಿಸುವ ಕೆಲಹೊತ್ತಿನ ಹಿಂದಷ್ಟೇ ಅದೇ ಸ್ಥಳದಲ್ಲಿ ಕೆಲ ಉತ್ತರಭಾರತ ಮೂಲದ ಕೂಲಿ ಕಾರ್ಮಿಕರು ವಿಶ್ರಾಂತಿ ಪಡೆಯುತ್ತಿದ್ದರು. ಇದನ್ನು ಗಮನಿಸಿದ ಗುತ್ತಿಗೆದಾರರು ಅವರನ್ನು ಬೇರೊಂದು ಸೈಟ್‌ಗೆ ಕಳುಹಿಸಿದ ಪರಿಣಾಮ ಅವರೂ ಅಪಾಯದಿಂದ ಪಾರಾಗಿದ್ದಾರೆ. ಮತ್ತೊಂದೆಡೆ ಮಣ್ಣು ಕುಸಿಯುತ್ತಿದ್ದ ವೇಳೆ ಶರತ್ ಜತೆ ಕೆಲಸ ನಿರ್ವಹಿಸುತ್ತಿದ್ದ ದೇವರಾಜ್ ಎಂಬಾತ ಮಣ್ಣು ಕುಸಿಯುತ್ತಿದ್ದಂತೆ ಬೊಬ್ಬೆ ಹೊಡೆದು ಅನಾಹುತದಿಂದ ತಪ್ಪಿಸಿಕೊಂಡರೆ, ಶರತ್ ಕೂಡ ಓಡಲು ಯತ್ನಿಸಿದರೂ ಕಾಲು ಸರಳುಗಳ ನಡುವೆ ಸಿಲುಕಿಕೊಂಡಿದ್ದರಿಂದ ಮಣ್ಣಿನಡಿ ಸಿಲುಕಿದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement