ಪುತ್ತೂರು ಟಿಎಪಿಸಿಎಂಎಸ್: ಕೈಗೆ ಬಂದ ತುತ್ತು ಬಾಯಿಗೆ...?
- ಆತ್ಮಭೂಷಣ್
ಮಂಗಳೂರು: ಪುತ್ತೂರು ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘ(ಟಿಎಪಿಸಿಎಂಎಸ್) ಪುನಃಶ್ಚೇತನಕ್ಕೆ ರಾಜ್ಯ ಸರ್ಕಾರ ರು. 1 ಕೋಟಿ ಅನುದಾನ ಘೋಷಿಸಿದೆ. ಇದನ್ನು ಪಡೆಯಬೇಕಾದರೆ, ಅಗತ್ಯ ದಾಖಲೆ ಪತ್ರಗಳನ್ನು ಸಹಕಾರ ಇಲಾಖೆಗೆ ಟಿಎಪಿಸಿಎಂಎಸ್ ನೀಡಬೇಕು. ಆದರೆ ದಾಖಲೆ ಪತ್ರಗಳೆಲ್ಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಎಸ್ಸಿಡಿಸಿಸಿ)ನಲ್ಲಿದೆ.
ಪಡೆದ ಸಾಲ ಮರುಪಾವತಿಸದೇ ಇರುವ ಕಾರಣ ಎಸ್ಸಿಡಿಸಿಸಿ ಬ್ಯಾಂಕ್ ಟಿಎಪಿಸಿಎಂಎಸ್ನ ಜಾಗವನ್ನು ಮುಟ್ಟುಗೋಲು ಹಾಕಿ ಏಲಂ ಮಾಡಿತ್ತು. ಇದರ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಈ ಮಧ್ಯೆ ಅನುದಾನ ಬೇಕಾದರೆ ಒಂದು ವಾರದೊಳಗೆ ದಾಖಲೆ ಪತ್ರಗಳನ್ನು ಹಾಜರುಪಡಿಸುವಂತೆ ಟಿಎಪಿಸಿಎಂಎಸ್ಗೆ ಸಹಕಾರ ಇಲಾಖೆ ಅಂತಿಮ ತಾಕೀತು ಮಾಡಿದೆ. ಈಗ ಅಗತ್ಯ ದಾಖಲೆ ಪತ್ರಕ್ಕೆ ಟಿಎಪಿಸಿಎಂಎಸ್, ಎಸ್ಸಿಡಿಸಿಸಿ ಬ್ಯಾಂಕ್ ಮುಂದೆ ಅಂಗಲಾಚುವ ಪರಿಸ್ಥಿತಿ ತಲೆದೋರಿದೆ. ರಾಜ್ಯ ಅನುದಾನ ಸಿಗುವುದು, ವಾಪಾಸ್ ಹೋಗುವ ವಿಚಾರ ಎಸ್ಡಿಸಿಸಿ ಬ್ಯಾಂಕ್ ನೀಡುವ ದಾಖಲೆ ಪತ್ರದ ಅವಧಿಯನ್ನು ಹೊಂದಿಕೊಂಡಿದೆ.
ನಷ್ಟಕ್ಕೆ ಜಾರಿದ ಬಗೆ...: ಈ ಮಾತು ಟಿಎಪಿಸಿಎಂಎಸ್ ಹಿಂದಿನ ಆಡಳಿತ ಮಂಡಳಿಗೆ ಸರಿಯಾಗಿ ಅನ್ವಯಿಸುತ್ತದೆ. 75 ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರು ಟಿಎಪಿಸಿಎಂಎಸ್, ಹಿಂದಿನ ಅಧ್ಯಕ್ಷರುಗಳ ಅವಧಿಯಲ್ಲಿ ನಷ್ಟಕ್ಕೆ ಜಾರಿತ್ತು. ಸಹಕಾರ ಭಾರತಿ ಆಡಳಿತದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕಷ್ಟ ನಷ್ಟಗಳು ಉಂಟಾದರೂ, ಆಡಳಿತ ಮಂಡಳಿ ಬದಲಾದ್ದು ಬಿಟ್ಟರೆ ಸುಧಾರಣೆ ಆಗಲೇ ಇಲ್ಲ. ಇದರ ಪರಿಣಾಮವೇ ಟಿಎಪಿಸಿಎಂಎಸ್ ವಿಪರೀತ ನಷ್ಟಕ್ಕೆ ಬಂತು.
ಅಡಕೆ ವಹಿವಾಟು ಬಂದ್: ಕಳೆದ 10 ವರ್ಷದಿಂದ ಅಡಕೆ, ಕಾಳುಮೆಣಸು ವ್ಯವಹಾರವನ್ನು ನಿಲ್ಲಿಸಿದೆ. ಕೃಷಿಕ ಸದಸ್ಯರು ಅಡಕೆ ತಂದು ಬಿಡ್ನಲ್ಲಿ ಮಾರಾಟ ಮಾಡುತ್ತಿದ್ದರು. ಮಾರಾಟಕ್ಕೆ ಮೊದಲು ಮುಂಗಡ ಮೊತ್ತ ನೀಡಲಾಗುತ್ತಿತ್ತು. ಅದೆಲ್ಲವೂ ಬಂದ್ ಆಗಿ ತಾಲೂಕಿಗೆ ಪಡಿತರ ಪೂರೈಸುತ್ತಿತ್ತು. ಅದು ಕೂಡ ಈಗ ಶಾಖಾ ವ್ಯಾಪ್ತಿಗಷ್ಟೇ ಸೀಮಿತ. ಕುರ್ನಡ್ಕದಲ್ಲಿರುವ ತನ್ನೆರಡು ಗೋದಾಮುಗಳನ್ನು ಖಾಸಗಿ ವಹಿವಾಟಿಗೆ ವಹಿಸಿದೆ. ಆ ಬಾಡಿಗೆಯಷ್ಟೇ ಇದರ ಆದಾಯ. ಈಗ ಪುನಶ್ಚೇತನಕ್ಕೆ ಸಹಕಾರ ಭಾರತಿ ಮುಖಂಡರು ಸಹರಿಸುತ್ತಿಲ್ಲ ಎಂದು ಆರೋಪಿಸಿ ಅಧ್ಯಕ್ಷ ಸಹಿತ ಐವರು ಸದಸ್ಯರು ಆಡಳಿತ ಮಂಡಳಿಗೆ ರಾಜಿನಾಮೆ ನೀಡಿದ್ದಾರೆ.
1 ಕೋಟಿಗೆ ಸಿಕ್ಕೀತೇ?: ಸದಾ ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟಿಎಪಿಸಿಎಂಎಸ್ ನಿರುಪಾಯವಾಗಿ ತನ್ನ ಸ್ಥಿರಾಸ್ತಿಯನ್ನೇ ಮಾರಾಟ ಮಾಡಲು ನಿರ್ಧರಿಸಿತು. 3.56 ಎಕರೆಯಲ್ಲಿ 1.96 ಎಕರೆಯನ್ನು 2012 ಅ.23ರಂದು ಎಸ್ಸಿಡಿಸಿಸಿ ಬ್ಯಾಂಕ್ 3.20 ಕೋಟಿಗೆ ಏಲಂ ಮಾಡಿದಾಗ ಖರೀದಿಸಿದ್ದು ಕ್ಯಾಂಪ್ಕೋ ಸಂಸ್ಥೆ.
ಈ ಮಧ್ಯೆ ಹದಗೆಟ್ಟ ಟಿಎಪಿಸಿಎಂಎಸ್ಗೆ ಪುನಃಶ್ಚೇತನ ನೀಡಲು ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ರು. 1 ಕೋಟಿ ನೆರವು ಪ್ರಕಟಿಸಿದ್ದರು. ಆದರೆ ಸ್ಥಿರಾಸ್ತಿ ಏಲಂ ಪ್ರಕ್ರಿಯೆ ಪೂರ್ತಿಯಾಗಿ ಮುಕ್ತಾಯವಾಗದ್ದರಿಂದ ರಾಜ್ಯದ ನೆರವು ದಕ್ಕಿಸಿಕೊಳ್ಳಲು ಟಿಎಪಿಸಿಎಂಎಸ್ ಹೆಣಗಾಡುತ್ತಿದೆ.
ಎಸ್ಸಿಡಿಸಿಸಿ ಲೆಕ್ಕಾಚಾರ: ಎಸ್ಸಿಡಿಸಿಸಿ ಬ್ಯಾಂಕಿಗೆ ಬರಬೇಕಾದ ಅಸಲು ರು. 1.17 ಕೋಟಿ, ಬಡ್ಡಿ ರು. 87.23 ಲಕ್ಷ, ದಂಡನೆ ಮೊತ್ತ ರು. 17 ಲಕ್ಷ, ದಾವಾ ಖರ್ಚು ರು. 2.80 ಲಕ್ಷ ಸೇರಿ ಒಟ್ಟು ರು. 2.24 ಕೋಟಿ. ಟಿಎಪಿಸಿಎಂಎಸ್ನಿಂದ ಕಳಂಜ ಸೇವಾ ಸಹಕಾರಿ ಸಂಘಕ್ಕೆ ರು. 22.12 ಲಕ್ಷ, ಕುಂಬ್ರ ಸೇವಾ ಸಹಕಾರಿ ಸಂಘಕ್ಕೆ ರು. 25.35 ಲಕ್ಷ ಬಾಕಿ ನೀಡಬೇಕು. ತನಗೆ ಬರಬೇಕಾದ ಮೊತ್ತದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಬರಬೇಕಾದ ಮೊತ್ತದಲ್ಲಿ ಪಡೆದದ್ದು ರು. 1.75 ಕೋಟಿ, ಕಳಂಜ ಮತ್ತು ಕುಂಬ್ರ ಬ್ಯಾಂಕ್ಗಳು ತಲಾ ರು. 10 ಲಕ್ಷದಷ್ಟು ಮೊತ್ತ ಬಿಟ್ಟುಬಿಟ್ಟಿವೆ. ಉಳಿಕೆ ಮೊತ್ತ ರು. 14 ಲಕ್ಷ, ಅದರಲ್ಲೂ ಈಗ ಪುರಸಭಾ ಶುಲ್ಕ ರು. 6 ಲಕ್ಷವನ್ನು ಪಾವತಿಸಬೇಕಾಗಿದ್ದು, ಟಿಎಪಿಸಿಎಂಎಸ್ ಕೈಗೆ ಕೊನೆಗೆ ಸಿಗುವುದು ರು. 8 ಲಕ್ಷ ಮಾತ್ರ. ಏಲಂ ಪ್ರಕ್ರಿಯೆ ಪೂರ್ಣಗೊಳ್ಳಲು 40 ದಿನ ಬೇಕು. ಬ್ಯಾಂಕಿನಿಂದ ದಾಖಲೆ ವಾಪಾಸ್ ಕೊಡುವಂತೆ ಲಿಖಿತ ಕೋರಿಕೆ ಬಂದಿಲ್ಲ ಎನ್ನುತ್ತಾರೆ ಎಸ್ಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್.
ಸಹಕಾರ ಭಾರತಿ ಮುಖಂಡರ ಮಾತುಕತೆ
ಎಸ್ಸಿಡಿಸಿಸಿ ಬ್ಯಾಂಕಿನಿಂದ ದಾಖಲೆಪತ್ರ ಬಿಡಿಸಿಕೊಳ್ಳಲು ಸಹಕಾರ ಭಾರತಿ ಮುಖಂಡರು ಮಾತುಕತೆ ನಡೆಸಿದ್ದಾರೆ. ರಾಜ್ಯ ಅನುದಾನ ಪಡೆದುಕೊಳ್ಳುಲು ಫೆಬ್ರವರಿ ವರೆಗೆ ಗಡುವು ವಿಸ್ತರಿಸುವಂತೆ ಸಹಕಾರಿ ಸಂಘಗಳ ಅಧಿಕಾರಿಗಳನ್ನು ವಿನಂತಿ ಮಾಡಲಾಗಿದೆ. ರು. 1 ಕೋಟಿ ಅನುದಾನ ಸಿಕ್ಕಿದರೆ, ಚಿನ್ನಾಭರಣ ಈಡಿನಲ್ಲಿ ಸಾಲ, ರಸಗೊಬ್ಬರ ವಹಿವಾಟು, ಸಹಕಾರಿ ಮೆಡಿಕಲ್ ಶಾಪ್ ತೆರೆಯುವ ಇರಾದೆ ಇದೆ ಎನ್ನುತ್ತಾರೆ ಬ್ಯಾಂಕಿನ ಅಧ್ಯಕ್ಷ ತಾಳ್ತಜೆ ಚಂದ್ರಶೇಖರ ಭಟ್.