'ಭಡ್ತಿ ಮೀಸಲಾತಿ' ಅಂಗೀಕಾರ: ದ್ವಾರಕನಾಥ್ ಆಗ್ರಹ
ಮಂಗಳೂರು: ನ್ಯಾಯಾಂಗ ಮತ್ತು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ವ್ಯವಸ್ಥೆ ಜಾರಿಗೆ ಬರಬೇಕಾಗಿದ್ದು, ಕೇಂದ್ರ ಸರ್ಕಾರ ಭಡ್ತಿ ಮೀಸಲಾತಿ ಮಸೂದೆ ಸಂಸತ್‌ನಲ್ಲಿ ಅಂಗೀಕರಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಆಗ್ರಹಿಸಿದ್ದಾರೆ.
ಭಾನುವಾರ ದ.ಕ.ಜಿಲ್ಲಾ ಪರಿವರ್ತನಾ ವೇದಿಕೆ ವತಿಯಿಂದ ನಗರದ ರವೀಂದ್ರ ಕಲಾಭವನದಲ್ಲಿ 'ಸಾಮಾಜಿಕ ಪರಿವರ್ತನೆಗಾಗಿ ಮೀಸಲಾತಿ' ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕಳೆದ ಅಧಿವೇಶನದಲ್ಲಿ ಬಿಎಸ್ಪಿ ಆಗ್ರಹದಿಂದ ಮೀಸಲಾತಿ ಭಡ್ತಿ ಮಸೂದೆ ಸಂಸತ್‌ನಲ್ಲಿ ಮಂಡನೆಯಾಯಿತು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಸಮೂದೆ ಅಂಗೀಕಾರಗೊಳ್ಳುವುದು ಬೇಕಿರಲಿಲ್ಲ. ಅದಕ್ಕಾಗಿ ಕಲ್ಲಿದ್ದಲು ಹಗರಣ ನೆಪದಲ್ಲಿ ಮಸೂದೆ ಅಂಗೀಕಾರವಾಗದಂತೆ ಮಾಡುವಲ್ಲಿ ಯಶಸ್ವಿಯಾಗಿವೆ ಎಂದರು.
ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಾಲಗಂಗಾಧರ ತಿಲಕ್ ಮೀಸಲಾತಿ ವಿರೋಧಿಸಿದ್ದರು. ಈಗ ಆರ್‌ಎಸ್‌ಎಸ್‌ಗೆ ತಿಲಕ್ ಗುರು ಸ್ಥಾನದಲ್ಲಿದ್ದಾರೆ. ಮೀಸಲಾತಿ ಜಾರಿಯಾದರೆ ಮೆರಿಟ್‌ಗೆ ಸ್ಥಾನ ಸಿಗುವುದಿಲ್ಲ ಎಂದು ಹೇಳಿದ್ದರು ತಿಲಕ್. ನಮ್ಮ ನ್ಯಾಯಾಲಯಗಳು ಇಂದಿಗೂ ತಿಲಕ್ ಹೇಳಿದ ರೋಗದಿಂದ ಬಳಲುತ್ತಿವೆ. ನ್ಯಾಯಾಲಯಗಳು ಕೂಡ ಮನುವಾದಿ, ವೈದಿಕೀರಣಗೊಂಡಿವೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಗದ್ದುಗೆಯಲ್ಲಿ ಎಸ್‌ಸಿ ಎಸ್‌ಟಿ ವರ್ಗದ ಅಧಿಕಾರಿಗಳ ಸಂಖ್ಯೆ ಮೀಸಲಾತಿ ಕಲ್ಪಿಸಿದರೂ ಕಡಿಮೆ. ದಲಿತರ ಸಂಖ್ಯೆಗನುಗುಣವಾಗಿ ಐಎಎಸ್, ಐಎಫ್‌ಎಸ್ ಅಧಿಕಾರಿಗಳು ಇಲ್ಲ ಎಂದರು.
ಚಳವಳಿ ಮುಖಂಡ ಡೀಕಯ್ಯ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾಲಯ ಎಸ್‌ಸಿ ಎಸ್‌ಟಿ ಘಟಕ ವಿಶೇಷಾಧಿಕಾರಿ ಎಂ.ಪಿ.ಉಮೇಶ್ಚಂದ್ರ ಭಡ್ತಿ ಮೀಸಲಾತಿ ಬಗ್ಗೆ, ಖಾಸಗಿ ರಂಗದಲ್ಲಿ ಮೀಸಲಾತಿ ಬಗ್ಗೆ ಲೇಖಕ ರಘೋತ್ತಮ ವಿಚಾರ ಮಂಡಿಸಿದರು.
ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಬ್ದುಲ್ ಛಜಲೀಲ್, ನಿವೃತ್ತ ಉಪಸಹಸೀಲ್ದಾರ್ ಭಾಸ್ಕರ, ವೇದಿಕೆ ಮುಖಂಡ ಡಾ.ವಾಸುದೇವ ಬೆಳ್ಳೆ ಇದ್ದರು.