ಮನೆ ತೆರವುಗೊಳಿಸದಿರಲು ಆಗ್ರಹ
ಸುಬ್ರಹ್ಮಣ್ಯ: ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿ ದಲಿತ ಕುಟುಂಬಗಳ ಮನೆ ಮತ್ತು ಕೃಷಿ ಜಮೀನು ತೆರವುಗೊಳಿಸುವುದರ ವಿರುದ್ಧ ಹರಿಹರ ಪಲ್ಲತ್ತಡ್ಕ ಗ್ರಾ.ಪಂ ವಿರುದ್ಧ ದ.ಕ ಜಿಲ್ಲಾ ದಲಿತ ಸೇವಾ ಸಮಿತಿ ವಿಟ್ಲ ಮತ್ತು ಸುಳ್ಯ ತಾಲೂಕು ಶಾಖೆ ವತಿಯಿಂದ ಸೋಮವಾರ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇದಕ್ಕೆ ಮಣಿದ ಗ್ರಾ.ಪಂ, ತಹಸೀಲ್ದಾರರ ಸೂಚನೆಯಂತೆ ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಗ್ರಾ.ಪಂ ಅಧ್ಯಕ್ಷ ಮತ್ತು ಕಾರ್ಯದರ್ಶಿ ಲಿಖಿತವಾಗಿ ಪತ್ರ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಸುಬ್ರಹ್ಮಣ್ಯ ಠಾಣಾಧಿಕಾರಿ ವೆಂಕಟ್ರಮಣ ಗೌಡ ಸಿಬ್ಬಂದಿಯೊಂದಿಗೆ ಮುಂಜಾಗ್ರತಾ ಕ್ರಮ ಕೈಗೊಂಡರು.