ಶಾಸಕ ಓವೈಸಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಸುಳ್ಯ: ಹಿಂದೂಗಳ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆಂಧ್ರ ಪ್ರದೇಶದ ಶಾಸಕ ಅಕ್ಬರುದ್ದೀನ್ ಓವೈಸಿ ವಿರುದ್ಧ ಸುಳ್ಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಪಟ್ಟಣದ ವಿಶ್ವನಾಥ ದೇವಸ್ಯ, ಲಕ್ಷ್ಮಣ ದೇವಸ್ಯ, ಕರುಣಾಕರ ಎಣ್ಣೆಮಜಲು ಇವರು ಸುಳ್ಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಕಾರು ಡಿಕ್ಕಿ:
ಚಿನ್ನಾಭರಣ ಲೂಟಿ
ಸುಳ್ಯ: ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರೊಂದಕ್ಕೆ ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಇಂಡಿಕಾ ಕಾರು ಡಿಕ್ಕಿ ಹೊಡೆದು, ಮಡಿಕೇರಿ ಕಡೆಯಿಂದ ಬಂದ ಕಾರಿನಲ್ಲಿದ್ದ ಮಹಿಳೆಯ ಚಿನ್ನವನ್ನು ಲೂಟಿ ಮಾಡಿ ಕೊಂಡೊಯ್ದ ಘಟನೆ ಭಾನುವಾರ ರಾತ್ರಿ ನಡೆದಿದೆ. ಮಡಿಕೇರಿ ಕಡೆಯಿಂದ ಬರುತ್ತಿದ್ದ ತಮ್ಮ ಕಾರಿಗೆ ಅರಂತೋಡು - ಕಲ್ಲುಗುಂಡಿ ಮಧ್ಯೆ ಸುಳ್ಯ ಕಡೆಯಿಂದ ಬಂದ ಇಂಡಿಕಾ ಕಾರು ಢಿಕ್ಕಿ ಹೊಡೆಯಿತು. ನಾವು ಕಾರಿಳಿದು ಮಾತನಾಡುತ್ತಿರುವಾಗ ಇಂಡಿಕಾ ಕಾರಲ್ಲಿದ್ದ ಯುವಕರು ನಮ್ಮ ಕಾರಲ್ಲಿದ್ದ ಮಹಿಳೆಯ ಚಿನ್ನ ಎಳೆದು ದರೋಡೆ ಮಾಡಿದ್ದಾಗಿ ಸುಳ್ಯ ಪೋಲೀಸರಿಗೆ ದೂರು ನೀಡಿದ್ದಾರೆ.
ರೇಲ್ವೆ ಹಳಿ ಸಮೀಪ
ಅಪರಿಚಿತ ಶವ ಪತ್ತೆ
ಮಂಗಳೂರು: ಕೇಂದ್ರ ರೈಲು ನಿಲ್ದಾಣ ರೇಲ್ವೇ ಹಳಿ ಸಮೀಪ 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆಯಾಗಿದೆ. ಸೋಮವಾರ ರೈಲು ಕ್ಯಾಬಿನ್ ಪಕ್ಕದಲ್ಲಿರುವ ಹಳಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ವೆನ್ಲಾಕ್ ಶವಾಗಾರದಲ್ಲಿ ಇರಿಸಲಾಗಿದೆ.
ಮಹಿಳೆ ಆತ್ಮಹತ್ಯೆ
ಮಲ್ಪೆ: ಇಲ್ಲಿನ ಕಡೆಕಾರು ಗ್ರಾಮದ ಕನ್ನಾರ್ಪಡಿಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರು ಶಶಿಕಲಾ (40), ದೈಹಿಕ ಅನಾರೋಗ್ಯದಿಂದ ಬಳಲುತ್ತಿದ್ದು ವೈದ್ಯರಲ್ಲಿ ಚಿಕಿತ್ಸೆ ಮಾಡಿದ್ದರೂ ಗುಣಮುಖವಾಗದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಭಾನುವಾರ ಸಂಜೆ ಮನೆಯ ಬೆಡ್ರೂಮಿನ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಭಾವ ಅಶೋಕ ಶೆಟ್ಟಿ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
---