ಕಾರ್ನಲ್ಲಿ ದಂಪತಿ, ಮಕ್ಕಳ ಶವ ಪತ್ತೆ
ಮಂಗಳೂರು: ಕೇರಳ ಕುಂಬಳೆ ಸಮೀಪದ ಸೀತಾಂಗೋಳಿಯಲ್ಲಿ ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆಯಾಗಿದೆ. ವಿದ್ಯಾನಗರ ನಿವಾಸಿ ಸೋನಿಕುಟ್ಟಿ, ಪತ್ನಿ ತ್ರೇಸಿ ಹಾಗೂ ಇಬ್ಬರು ಮಕ್ಕಳಾದ ಜೆರಿನ್, ಜೆವೆಲ್ ಎಂದು ಗುರುತಿಸಲಾಗಿದೆ.
ಬಹಳ ಹೊತ್ತಿನವರೆಗೆ ಕಾರ್ ಪಾರ್ಕ್ ಆಗಿರುವುದನ್ನು ನೋಡಿ ಸಂಶಯಗೊಂಡ ಜನ ಹತ್ತಿರ ಬಂದು ನೋಡಿದಾಗ ಶವಗಳು ಪತ್ತೆಯಾಯಿತು. ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ.
ಇಬ್ಬರು ಮಕ್ಕಳು ಕಾರಿನ ಹಿಂಬದಿ ಸೀಟ್ನಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರ ಕುತ್ತಿಗೆಯಲ್ಲಿ ಗಾಯದ ಗುರುತಿದೆ. ಮಕ್ಕಳು ಕುಡ್ಲು ಜೈ ಮಾತಾಶಾಲೆಯಲ್ಲಿ ಕಲಿಯುತ್ತಿದ್ದರು ಎಂದು ತಿಳಿದುಬಂದಿದೆ. ಮನೆಯಿಂದ 15 ಕಿ.ಮೀ. ದೂರದಲ್ಲಿ ಕಾರುನಿಂತಿದೆ. ಮನೆಯಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಣ್ಣೂರಿಂದ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಣಕಾಸು ಮುಗ್ಗಟ್ಟಿನಿಂದ ಈ ಕೃತ್ಯ ನಡೆಸಿರುವುದಾಗಿ ಸೋನಿಕುಟ್ಟಿ ಬರೆದ ಆತ್ಮಹತ್ಯೆ ಪತ್ರ ಲಭಿಸಿದೆ. ಸಾಂದರ್ಭಿಕ ಸಾಕ್ಷ್ಯಗಳೂ ಕೂಡಾ ಸೋನಿ ಕುಟ್ಟಿ ತನ್ನ ಪತ್ನಿ ಮತ್ತು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಬೊಟ್ಟು ಮಾಡಿವೆ. ಸೋಮವಾರ ರಾತ್ರಿ ಪತ್ನಿ ಮತ್ತು ಮಕ್ಕಳನ್ನು ಮನೆಯಲ್ಲಿ ಕೊಲೆ ಮಾಡಿ ಕಾರಿನಲ್ಲಿ ಹಾಕಿ ಮಂಗಳವಾರ ಮಯಿಪ್ಪಾಡಿ ಬಳಿ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.