ಸಂಪೂರ್ಣ ಸ್ವಚ್ಛತಾ ಆಂದೋಲನ: ಕಡಬಕ್ಕೆ ನೋಯ್ಡಾ ತಂಡ
ಉಪ್ಪಿನಂಗಡಿ: ಕಡಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಆದ ಪ್ರಗತಿ ಮತ್ತು ಯಶೋಗಾಥೆಗಳನ್ನು ವಿಡಿಯೊ ಚಿತ್ರೀಕರಣ ಮೂಲಕ ದಾಖಲಿಸಲು ನೋಯ್ಡಾದ ಮೀಡಿಯಾ ವಿಶನ್ ಸಂಸ್ಥೆಯ ತಂಡ ಮಂಗಳವಾರ ಕಡಬ ಗ್ರಾಮ ಪಂಚಾಯಿತಿಗೆ ಆಗಮಿಸಿತ್ತು.
ಜಿಲ್ಲೆಯ ಮೆನ್ನಬೆಟ್ಟು, ಕಡಬ, ಹೊಸಂಗಡಿ, ಲಾಯಿಲ ಗ್ರಾಮ ಪಂಚಾಯಿತಿಯಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಸ್ವಚ್ಛತೆ ಬಗ್ಗೆ ಕೈಗೊಂಡ ಕಾರ್ಯ ವೈಖರಿಯನ್ನು ವಿಡಿಯೊ ಚಿತ್ರೀಕರಣದ ಮೂಲಕ ದಾಖಲಿಸಿ ಸರ್ಕಾರಕ್ಕೆ ಒಪ್ಪಿಸುವ ಸಲುವಾಗಿ ಈ ತಂಡ ಆಗಮಿಸಿತ್ತು.
ಪಂಚಾಯಿತಿಯಲ್ಲಿ ಸ್ವಚ್ಛತೆ ಬಗ್ಗೆ ನಡೆದ ಗ್ರಾಮ ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಿದ ದ್ರವ ತಾಜ್ಯ ವಿಲೇವಾರಿ ಘಟಕ ಹಾಗೂ ಘನತಾಜ್ಯ ವಿಲೇವಾರಿ ಘಟಕದ ಕಾರ್ಯವೈಖರಿ ಮತ್ತು ಇದಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಗ್ರಾಮಸ್ಥರ ಪ್ರಶ್ನೆಗಳಿಗೆ ಅಧ್ಯಕ್ಷರು ಹಾಗೂ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ವಿವರಣೆ ನೀಡುವುದನ್ನು ಚಿತ್ರೀಕರಿಸಲಾಯಿತು.
ಬಳಿಕ ತಂಡ ದ್ರವತಾಜ್ಯ ಹಾಗೂ ಘನ ತಾಜ್ಯ ವಿಲೇವಾರಿ ಘಟಕ ಕಾರ್ಯ ನಿರ್ವಹಣೆಯನ್ನು ಚಿತ್ರೀಕರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹನೀಫ್ ಸ್ವಾಗತಿಸಿದರು. ಗ್ರಾಮಸ್ಥರಾದ ಭಾರತಿ, ಶಶಿಕಲಾ, ವಾರಿಜ, ಪದ್ಮಯ್ಯ, ಶಿವರಾಮ, ಭುವನೇಂದ್ರ, ವಾಸುದೇವ ಮತ್ತಿತರರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡರು. ಪಿ.ಸಿ. ಸೆರೀನ್ ನೇತೃತ್ವದ ತಂಡದಲ್ಲಿ ಪ್ರಿಯಾ, ಕಮಲೇಶ್, ಶಂಕರ್ ಇದ್ದರು.
ನೀಲಾವತಿ ಶಿವರಾಂ, ಆದಂ ಕುಂಡೋಳಿ, ಶೋಭಾ ಜಯಾನಂದ, ಚಂದ್ರಾವತಿ, ರೋಹಿತ್ ಮತ್ತಿತರರು ಇದ್ದರು.