ಕಾಂಗ್ರೆಸ್ ಪಾದಯಾತ್ರೆ ಎರಡನೇ ದಿನ
ಮಂಗಳೂರು: ಕಾಂಗ್ರೆಸ್ ನಡಿಗೆ ಕೋಮುಸೌಹಾರ್ದದ ಕಡೆಗೆ 2ನೇ ದಿನ ಯಶಸ್ವಿಯಾಗಿ ಪೂರೈಸಿದೆ.
ನಾಯಕರು ಗುಂಪು ಗುಂಪಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಸ್ಥಳೀಯರಲ್ಲದೆ ಕಾಂಗ್ರೆಸ್‌ನ ಈ ಹಿಂದಿನ ಎರಡು ಪಾದಯಾತ್ರೆಯಲ್ಲಿ ಭಾಗವಹಿಸಿದ ಉತ್ಸಾಹಿ ಕಾರ್ಯಕರ್ತರು ಕರಾವಳಿ ಪಾದಯಾತ್ರೆಯಲ್ಲಿಯೂ ಭಾಗವಹಿಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ಸರಾಸರಿ 500 ಮಂದಿ ಇದ್ದರೆ, ಸಭೆಗೆ ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಸೇರುತ್ತಿದ್ದಾರೆ. ಸ್ಥಳೀಯ ಕಾರ್ಯಕರ್ತರು ಸ್ವಲ್ಪದೂರ ಪಾದಯಾತ್ರೆಯಲ್ಲಿ ಭಾಗವಹಿಸಿ ಮತ್ತೆ ತಮ್ಮೂರಿಗೆ ಮರಳುತ್ತಿದ್ದಾರೆ.
ಸುರತ್ಕಲ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರರಮೇಶ್ವರ್, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸುರತ್ಕಲ್‌ನಲ್ಲಿ ಕಾಲೇಜು ಮಂಜೂರು ಮಾಡಿತು. ಬೆಂಗಳೂರಿನಂತೆ ಮಂಗಳೂರನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಎಂಆರ್‌ಪಿಎಲ್‌ನಂಥ ಯೋಜನೆಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿ ಉದ್ಯೋಗಾವಕಾಶ ನೀಡಿದೆ.
35 ಸಾವಿರ ಕೋಟಿ ಬಂಡವಾಳದೊಂದಿಗೆ ಅನೇಕ ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಅವಕಾಶ ನೀಡಿತು. ಆದರೆ ಬಿಜೆಪಿ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಶೆಟ್ಟರು ರಾಜ್ಯದ ಜನರನ್ನು ಗೌರವಿಸುವುದಾದರೆ ತಕ್ಷಣ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಮಾತನಾಡಿ, ದೇಶ ಮತ್ತು ನಮ್ಮ ರಕ್ಷಣೆಗೆ ಶ್ರಮಿಸುತ್ತಿರುವ ಯೋಧರ ಹಾಗೂ ಪೊಲೀಸರ ವೇತನ ಹೆಚ್ಚಿಸಿ, ಸೂಕ್ತ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಗಾಂಧಿ ಬಲಿದಾನಗೈದ ದಿನ. ಅವರು ಸಾರಿದ ತ್ಯಾಗ, ಮನೋಭಾವ ಹಾಗೂ ಭಾವೈಕ್ಯಕ್ಕೆ ಶ್ರಮಿಸಬೇಕು ಎಂದರು.
ಬಿಜೆಪಿಯನ್ನು ಮನೆಗೆ ಕಳಿಸುತ್ತೇವೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬೆಂಗಳೂರು, ಬಳ್ಳಾರಿ ಪಾದಯಾತ್ರೆ ಮೂಲಕ ರೆಡ್ಡಿ, ಯಡ್ಡಿಯನ್ನು ಜೈಲಿಗೆ ಕಳುಹಿಸಿದೆವು. ಈ ಬಾರಿಯ ಪಾದಯಾತ್ರೆಯಲ್ಲಿ ಬಿಜೆಪಿಯನ್ನು ಮನೆಗ ಕಳುಹಿಸುತ್ತೇವೆ ಎಂದರು. ಜನ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಪರಿಹಾರಕ್ಕೆ ಮುಂದಾಗದ ಬಿಜೆಪಿ ಆಡಳಿತ, ಅಧಿಕಾರಕ್ಕಾಗಿ ಕಿತ್ತಾಡುತ್ತಿದೆ. ಉತ್ತರ ಕರ್ನಾಟಕದಲ್ಲಿ ಬರದಿಂದ ಜನತೆ ನಲುಗುತ್ತಿದ್ದರೂ ಯಾವುದೇ ಶಾಸಕರು ಸಚಿವರು ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ವಿ.ಆರ್.ಸುದರ್ಶನ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ, ವಿಧಾನಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಂಸದ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಶಾಸಕ ಯು.ಟಿ.ಖಾದರ್, ಐವನ್ ಡಿಸೋಜ, ಪಿ.ವಿ. ಮೋಹನ್, ಸಿ.ಎಂ. ಇಬ್ರಾಹಿಂ ಮತ್ತಿತರರು ಇದ್ದರು.
ಶೆಟ್ಟರ್ ರಾಜಿನಾಮೆ ನೀಡಲಿ
12 ಶಾಸಕರ ರಾಜಿನಾಮೆ ಅಂಗೀಕಾರ ನಾಟಕ, ಸರ್ಕಾರ ಉರುಳುವುದಿಲ್ಲ. ಇದು ರಾಜಕೀಯ ತಂತ್ರ. ರಾಜಕಾರಣ ಮಾಡಲು ನಮಗೂ ಗೊತ್ತಿದೆ. ಬಿಸಿಲಿಗೆ ಬಂದು ರಸ್ತೆಯಲ್ಲಿ ನಡೆಯುವ ಅಗತ್ಯ ಇಲ್ಲ. ಆದರೆ ನಾವು ಜನರ ಬಳಿಗೆ ಹೋಗಲು ಪಾದಯಾತ್ರೆ ಮಾಡುತ್ತಿದ್ದೇವೆ. ಶೆಟ್ಟರ್ ರಾಜಿನಾಮೆ ನೀಡಿ ಚುನಾವಣೆಗೆ ಅವಕಾಶ ಕಲ್ಪಿಸಿಕೊಡಲಿ. ಅವರು ಮಹಾತ್ಮರಾಗುತ್ತಾರೆ.
-ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್
ಹಾರ ಕಿತ್ತೆಸೆದ ಪೂಜಾರಿ!
ಸುರತ್ಕಲ್ ಸಮೀಪ ಬಿ.ಜನಾರ್ದನ ಪೂಜಾರಿ ಆಗಮಿಸುತ್ತಿರುವಂತೆಯೇ ಸ್ಥಳೀಯ ಮುಖಂಡರು ಬಂದು ಹಾರ ಹಾಕಿದರು. ಹಾರ ಹಾಕುವ ಬಗ್ಗೆ ನಿರೀಕ್ಷೆ ಇಲ್ಲದಿದ್ದ ಪೂಜಾರಿ ಒಮ್ಮೆ ದಂಗಾದರು, ಸಾವರಿಸಿ ಹಾರ ತೆಗೆದು ಹಾಕಿದವರ ಮುಖಕ್ಕೆ ಎಸೆದರು. ಇದೇ ವೇಳೆ ಪೂಜಾರಿಗೆ ಜೈ ಕಾರ ಹಾಕುತ್ತಿದ್ದವರನ್ನೂ ಗದರಿದರು.
ಉಪವಾಸ, ಮೌನವೃತ
ಗಾಂಧಿಸ್ಮತಿ ದಿನ ಹಿನ್ನೆಲೆಯಲ್ಲಿ ಎಐಸಿಸಿ ಸದಸ್ಯ ಪಿ.ವಿ.ಮೋಹನ್ ದಿನವಿಡೀ ಉಪವಾಸ ನಡೆಸಿದರು. ಹಾಗೂ ಸಂಪೂರ್ಣ ಮೌನವ್ರತಾಚರಣೆ ನಡೆಸಿದರು.