ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿದ್ಯುತ್ ಯೋಜನೆ ಸಂತ್ರಸ್ತರಿಗೆ ನ್ಯಾಯೋಚಿತ ಪರಿಹಾರ: ಎಸಿ

Lingaraj Badiger
Updated On : 31 Jan 2013, 11:14 am

ಉಪ್ಪಿನಂಗಡಿ: ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ಎಂಬಲ್ಲಿ ಕುಮಾರಾಧಾರ ನದಿಗೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸುವ ಉದ್ದೇಶಿತ ಶ್ರೀ ಸಹಸ್ರಲಿಂಗೇಶ್ವರ ಪವರ್ ಪ್ರಾಜೆಕ್ಟ್ ಸಂಸ್ಥೆಯಿಂದ ಸಂತ್ರಸ್ತಗೊಳ್ಳಲಿರುವ ಎಲ್ಲರಿಗೂ ನ್ಯಾಯೋಚಿತ ಪರಿಹಾರ ಒದಗಿಸುವಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಪ್ರಸನ್ನ ಭರವಸೆ ನೀಡಿದ್ದಾರೆ.
ಯೋಜನಾ ಪರಿಸರದ ನಿವಾಸಿಗರು, ಕಿಸಾನ್ ಸಂಘಟನೆಯ ಸಹಕಾರದೊಂದಿಗೆ ಪವರ್ ಪ್ರಾಜೆಕ್ಟ್ ಸಂಸ್ಥೆಯಿಂದ ಸಂತ್ರಸ್ತರಿಗೆ ವಂಚನೆಯಾಗುತ್ತಿದೆ ಎಂಬ ಲಿಖಿತ ದೂರನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು. ಈ ಬಗ್ಗೆ ಕೂಲಂಕಶ ಪರಿಶೀಲನೆ ನಡೆಸಿ ವರದಿ ಒಪ್ಪಿಸುವಂತೆ ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್‌ಗೆ ನಿರ್ದೇಶನ ನೀಡಿದ್ದರು.
ಪಾರದರ್ಶಕ ಸರ್ವೇ: ಈ ಹಿನ್ನೆಲೆಯಲ್ಲಿ ಅಡೆಕ್ಕಲ್ ಕುಮಾರಾಧಾರ ನದಿಯ ಯೋಜನಾ ಸ್ಥಳಕ್ಕೆ ಭೇಟಿ ನೀಡಿದ ಪ್ರಸನ್ನ, ಪರಿಸರದ ನಿವಾಸಿಗರ ಜೊತೆಗೂಡಿ ಮಾತುಕತೆ ನಡೆಸಿದರು. ಪಾರದರ್ಶಕ ಸರ್ವೇ ನಡೆಸಿ, ಮುಳುಗಡೆಯಾಗುವ ನಿಖರ ಪ್ರದೇಶವನ್ನು ಗುರುತಿಸಲಾಗುವುದು. ಸಂತ್ರಸ್ತರಿಗೆ ನ್ಯಾಯೋಚಿತ ಪರಿಹಾರ ಒದಗಿಸಲಾಗುವುದು ಎಂದು  ತಿಳಿಸಿದರು.
ಕಾಮಗಾರಿ ವೇಳೆ ಬಂಡೆಕಲ್ಲುಗಳನ್ನು ಒಡೆಯುವಾಗ ಉಂಟಾಗುವ ಕಂಪನದಿಂದಾಗಿ ಸ್ಥಳೀಯ ಕುಂಞ ಮತ್ತು ಕಮಲ ಎಂಬವರ ಮನೆಯು ಬಿರುಕು ಬಿಟ್ಟ ಬಗ್ಗೆ ಪರಿಶೀಲನೆ ನಡೆಸಿ, ಮನೆಯನ್ನು ಕಂಪೆನಿಯವರ ವೆಚ್ಚದಲ್ಲೇ ದುರಸ್ತಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಸಂತ್ರಸ್ತರ ನೆಪದಲ್ಲಿ ಹಣ ಗುಳುಂ: ವಿದ್ಯುತ್ ಉತ್ಪಾದನಾ ಘಟಕದ ನಿಗದಿತ ಪ್ರದೇಶದಲ್ಲಿ ನದಿಯ ಇಕ್ಕೆಲಗಳಲ್ಲಿಯೂ ನದಿ ಪರಂಬೋಕು ಭೂಮಿ ಇದ್ದು, ಅದು ಅತಿಕ್ರಮಣಕ್ಕೆ ತುತ್ತಾಗಿ ಕೃಷಿ ಭೂಮಿಯಾಗಿದೆ. ಇದೀಗ ಈ ಪರಂಬೋಕು ಭೂಮಿಯ ಹೆಸರಿನಲ್ಲಿ ಹಲವಾರು ಮಂದಿ ವಿದ್ಯುತ್ ಉತ್ಪಾದನಾ ಸಂಸ್ಥೆಯಿಂದ ಲಕ್ಷಾಂತರ ರು. ಹಣವನ್ನು ಸಂತ್ರಸ್ತರ ನೆಪದಲ್ಲಿ ಪಡೆದುಕೊಂಡಿದ್ದಾರೆ ಎಂದು ಸ್ಥಳದಲ್ಲಿದ್ದ ಪತ್ರಕರ್ತ ಸರ್ವೇಶ್ ಭಟ್ ಮಂಗಲ್ಪಾಡಿ ಸಹಾಯಕ ಕಮಿಷನರ್ ಗಮನಕ್ಕೆ ತಂದರು. ಈ ಬಗ್ಗೆ ತಕ್ಷಣವೇ ಸ್ಪಂದಿಸಿದ ಎಸಿ, ಪರಂಬೋಕು ಭೂಮಿಯ ಹೆಸರಿನಲ್ಲಿ ಯಾರದರೂ ಹಣ ಪಡೆದಿದ್ದಲ್ಲಿ ಅದನ್ನು ಸರ್ಕಾರಕ್ಕೆ ಸಂದಾಯ ಮಾಡಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಹಾಯಕ ಕಮಿಷನರ್ ಭೇಟಿ ಸಮಯದಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ, ಕಂದಾಯ ಗ್ರಾಮ ಕರಣಿಕರಾದ ಪೂವಪ್ಪ, ಸುಧಾಕರ ರೆಡ್ಡಿ, ರಮಾನಾಂದ ಚೆಕ್ಕಾಡಿ ಇದ್ದರು. ರೈತ ಸಂಘದ ಮುಂದಾಳು ರೂಪೇಶ್ ರೈ ಅಲಿಮಾರ ನೇತೃತ್ವದಲ್ಲಿ ರೈತ ಕಿಸಾನ್ ಸೇನಾ ಕಾರ್ಯಕರ್ತರು, ಸ್ಥಳೀಯ ನಿವಾಸಿಗರು ಮಾಹಿತಿ ವಿನಿಮಯ ಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement