ಸಂಸ್ಕಾರಯುತ ವಿದ್ಯೆ ಅಗತ್ಯ: ಕನ್ಯಾಡಿ ಸ್ವಾಮೀಜಿ
ಬೆಳ್ತಂಗಡಿ: ಸಂಸ್ಕಾರಯುತ ವಿದ್ಯೆಯಿದ್ದರೆ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಗೌರವದಿಂದ ಬದುಕಬಹುದು ಎಂದು ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.
ಭಾನುವಾರ ಡೆಂಜೋಳಿ ಶ್ರೀಸದಾಶಿವ ದೇವಸ್ಥಾನದ ತೃತೀಯ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತು ವರ್ಷಾವಧಿ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ವಿದೇಶಿಯರನ್ನೂ ಆಕರ್ಷಿಸುವ ಸಾಮರ್ಥ್ಯ ಹಿಂದೂ ಧರ್ಮಕ್ಕಿದೆ. ಆದರೆ ನಮಗೆ ಮಾತ್ರ ವಿದೇಶಿ ವ್ಯಾಮೋಹ ಹೆಚ್ಚಾಗುತ್ತಿದೆ. ನಿಜವಾದ ಸುಖ ಧರ್ಮಾಂತರ್ಗತವಾಗಿರಬೇಕು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆ ಡಾ. ಪದ್ಮಪ್ರಸಾದ ಅಜಿಲ ಮಾತನಾಡಿ, ಅಳದಂಗಡಿಯ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ನವೀಕರಣಕ್ಕೆ ಇಲ್ಲಿನ ಹಿಂದಿನ ಅರ್ಚಕ ದಿ.ರಾಮಕೃಷ್ಣ ಮಂಜಿತ್ತಾಯ ಅವರು ಪ್ರೇರಣೆ ಎಂದರು.
ಅತಿಥಿಗಳಾಗಿ ಲೋಕಸೇವಾ ಆಯೋಗದ ಸದಸ್ಯ ಎಸ್.ಆರ್. ರಂಗಮೂರ್ತಿ, ಬಿಜೆಪಿ ಮಂಗಳೂರು ಅಧ್ಯಕ್ಷ ಶ್ರೀಕರ ಪ್ರಭು, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಕ್ಯಾಂಪ್ಕೋ ನಿರ್ದೇಶಕ ಡಿ.ಬಿ. ಬಾಲಕೃಷ್ಣ, ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್, ಜಿ.ಪಂ. ಸದಸ್ಯೆ ತುಳಸಿ ಹಾರಬೆ, ಪಡಂಗಡಿ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್, ಮಂಗಳೂರು ಸಹ್ಯಾದ್ರಿ ಸಮೂಹ ಶಿಕ್ಷಣ ಕೇಂದ್ರದ ಅಧ್ಯಕ್ಷ ಮಂಜುನಾಥ ಭಂಡಾರಿ, ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಎಚ್. ಬಿರ್ಮಣ ಶೆಟ್ಟಿ ಹಂಕರಜಾಲು, ಉತ್ಸವ ಸಮಿತಿ ಅಧ್ಯಕ್ಷ ಜಿ. ಜಯರಾಮ ಗೌಡ, ಶ್ರೀ ಸದಾಶಿವ ಸೇವಾ ಭಜನಾ ಸಮಿತಿ ಅಧ್ಯಕ್ಷ ಎಚ್. ಶ್ರೀನಿವಾಸ ಶೆಟ್ಟಿ ಹಂಕರಜಾಲು ಇದ್ದರು.
ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಹರೀಶ್ ಪೂಂಜ ಸ್ವಾಗತಿಸಿದರು. ದೇಗುಲ ಆಡಳಿತ ಮೊಕ್ತೇಸರ ಮತ್ತು ಪ್ರಧಾನ ಅರ್ಚಕ ಡಿ.ಉದಯ ಮಂಜಿತ್ತಾಯ ಪ್ರಸ್ತಾವಿಸಿದರು. ಅಧ್ಯಾಪಕ ಕೆ.ಶಿವಶಂಕರ ಭಟ್ ಮತ್ತು ಸುರೇಶ್ ಆರಂಬೋಡಿ ನಿರೂಪಿಸಿದರು.
ಇದಕ್ಕೂ ಮೊದಲು ಬೆಳಗ್ಗೆ 9.21ಕ್ಕೆ ಕುಂಭಲಗ್ನದಲ್ಲಿ ಶ್ರೀಸದಾಶಿವ ದೇವರಿಗೆ ಬ್ರಹ್ಮಕಲಶಾಭಿಷೇಕ ನೆರವೇರಿತು.