ಬಿಡ್ ಸಲ್ಲಿಕೆ ಮೊದಲೇ ಕಾಮಗಾರಿ ಪ್ರಾರಂಭ!
ಮಂಗಳೂರು: ಸರ್ಕಾರಿ ಯೋಜನೆಗಳ ಯಾವುದೇ ಕಾಮಗಾರಿ ನಡೆಸಬೇಕಾದರೆ ಟೆಂಡರ್ ಪ್ರಕ್ರಿಯೆ ಆಗಲೇ ಬೇಕು. ಟೆಂಡರ್ ಪೂರ್ಣಗೊಂಡ ಬಳಿಕವೇ ಗುತ್ತಿಗೆದಾರರು ಕಾಮಗಾರಿ ಪೂರೈಸುತ್ತಾರೆ. ಆದರೆ ಮಂಗಳೂರು ಮಹಾನಗರ ಪಾಲಿಕೆ ಇದಕ್ಕೆ ಹೊರತಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ತಿಗೊಳ್ಳುವ ಮೊದಲೇ ಶೌಚಾಲಯ ನವೀಕರಣ ಕಾಮಗಾರಿ ಪ್ರಾರಂಭಿಸುವ ಮೂಲಕ ಟೆಂಡರ್ ನಿಯಮಕ್ಕೆ ತಾನು ಅತೀತ ಎನ್ನುವಂತೆ ವರ್ತಿಸಲು ಹೊರಟಿದೆ.
ಸಭಾಂಗಣ ಮಹಡಿಯಲ್ಲಿರುವ ಪಾಲಿಕೆಯ ವಿಪಕ್ಷ ನಾಯಕರ ಕಚೇರಿ ಪಕ್ಕದ ಸಾರ್ವಜನಿಕ ಶೌಚಾಲಯವನ್ನು ನವೀಕರಣ ಉದ್ದೇಶದಿಂದ ತಿಂಗಳ ಹಿಂದೆ ಕೆಡವಲಾಗಿತ್ತು. ಶೌಚಾಲಯವನ್ನು ರು. 12 ಲಕ್ಷ ವೆಚ್ಚದಲ್ಲಿ ನವೀಕರಣ ಸೇರಿದಂತೆ ಇತರೆ ಕಾಮಗಾರಿಗೆ ಜ.8ರಂದು ಪಾಲಿಕೆ ಅಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರರು ಇ-ಟೆಂಡರ್ ಕರೆದಿದ್ದರು.
ಫೆ.8ರಂದು ಟೆಂಡರ್ ಸಲ್ಲಿಕೆಗೆ ಕೊನೆದಿನ. ಫೆ.11ರಂದು ಟೆಂಡರ್ ತೆರೆಯುವುದಾಗಿ ಪ್ರಕಟಣೆ ಹೊರಡಿಸಿದ್ದರು. ಟೆಂಡರ್ ನಂತರ 3 ತಿಂಗಳಲ್ಲಿ ಕಾಮಗಾರಿ ಮುಕ್ತಾಯಕ್ಕೆ ಗಡುವು ವಿಧಿಸಲಾಗಿದೆ. ಟೆಂಡರ್ಗೆ ಮೊದಲೇ ಕಾಮಗಾರಿ ಶುರು ಮಾಡುವುದಾದರೆ ಟೆಂಡರ್, ಪ್ರಕಟಣೆ ಅಗತ್ಯವಿತ್ತೇ? ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ.
ತರಾತುರಿ ಯಾಕೆ?: ಪಾಲಿಕೆಯ ಸಭಾಂಗಣ, ಗ್ಯಾಲರಿ, ಮೇಯರ್, ಉಪಮೇಯರ್, ವಿವಿಧ ಸ್ಥಾಯೀ ಸಮಿತಿ, ವಿಪಕ್ಷ ನಾಯಕರ ಕಚೇರಿ ಸೇರಿದಂತೆ ವಿವಿಧ ಕೊಠಡಿಗಳನ್ನು ಕಳೆದ ವರ್ಷ ರು. 1 ಕೋಟಿಗೂ ಹೆಚ್ಚಿನ ಮೊತ್ತದಲ್ಲಿ ನವೀಕರಿಸಲಾಗಿತ್ತು. ಆಗಲೇ ಸಭಾಂಗಣದ ಎರಡೂ ಬದಿಯ ಶೌಚಾಲಯ ನವೀಕರಣಕ್ಕೆ ನಿರ್ಧರಿಸಲಾಗಿತ್ತು. ಆಗ ಹಣವನ್ನು ಹೊಂದಿಸಿರಲಿಲ್ಲ. ಅದಕ್ಕೂ ಮೊದಲೇ ಅಕ್ಟೋಬರ್ನಲ್ಲಿ ತರಾತುರಿಯಲ್ಲಿ ದುರಸ್ತಿಬದಲು ಶೌಚಾಲಯನ್ನು ಹಿಂದಿನ ಗುತ್ತಿಗೆದಾರರು ಒಡೆದು ಹಾಕಿದ್ದರು. ಈಗ 2012-13ನೇ ಸಾಲಿನ 13ನೇ ಹಣಕಾಸು ಪ್ರೋತ್ಸಾಹಕ ನಿಧಿಯಲ್ಲಿ ಶೌಚಾಲಯ ನವೀಕರಣ ಕಾಮಗಾರಿಗೆ ಪಾಲಿಕೆ ತೀರ್ಮಾನಿಸಿತ್ತು. ಪತ್ರಿಕೆಯಲ್ಲಿ ಟೆಂಡರ್ ಪ್ರಕಟಣೆ ಪ್ರಕಟಿಸಿದ್ದು ಜ.10ರಂದು. 15 ದಿನಗಳಲ್ಲಿ ದಿಢೀರನೆ ಶೌಚಾಲಯ ನವೀಕರಣ ಕಾಮಗಾರಿ ಪ್ರಾರಂಭಿಸಲಾಗಿದೆ. ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರೊಬ್ಬರು ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಪಾಲಿಕೆ ಮೂಲಗಳ ಪ್ರಕಾರ, 8 ಬೇಸಿನ್, ಅಂಗವಿಕಲರಿಗೆ 2 ಬೇಸಿನ್ ಅಲ್ಲದೆ ವಿಪಕ್ಷ ನಾಯಕರಿಗೆ ಪ್ರತ್ಯೇಕ ಶೌಚಾಲಯ ರೂಪುಗೊಳ್ಳಲಿದೆ. ಸಭಾಂಗಣದ ಇನ್ನೊಂದು ಬದಿ ಶೌಚಾಲಯ ನವೀಕರಣ ಬಾಕಿ ಇದೆ. ಅಲ್ಲಿಯೂ ಇದೇ ಮಾದರಿಯಲ್ಲಿ ಶೌಚಾಲಯ ನವೀಕರಣಗೊಳ್ಳಲಿದೆ.
ಎರಡೂ ಶೌಚಾಲಯ ನವೀಕರಣಕ್ಕೆ ಪ್ರತ್ಯೇಕ ರು. 12 ಲಕ್ಷ ಮೊತ್ತ ಬಳಕೆಯೇ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಗೊಂದಲವಿದೆ. ಇನ್ನು ಪ್ಲಂಬಿಂಗ್, ಎಲೆಕ್ಟ್ರಿಕಲ್ ಕೆಲಸಕ್ಕೆ ಪ್ರತ್ಯೇಕ ಮೊತ್ತ ತೆರಬೇಕು.
ಇವರೇನಂತಾರೆ?
ಶೌಚಾಲಯ ನವೀಕರಣ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಸದ್ಯ ಸಾರ್ವಜನಿಕ ಹಿತದೃಷ್ಟಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎನ್ನುವುದು ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಸಮಜಾಯಿಸಿ.
ಟೆಂಡರ್ಗೆ ಮೊದಲೇ ಶೌಚಾಲಯ ಒಡೆಯುವ ಅಗತ್ಯವೇನಿತ್ತು? ಒಡೆದ ಬಳಿಕ ತುರ್ತು ಕಾಮಗಾರಿ ಎಂದಾದರೆ 3 ತಿಂಗಳು ವಿಳಂಬಿಸಿದ್ದು ಯಾಕೆ? ಒಂದು ಶೌಚಾಲಯ ನವೀಕರಣಕ್ಕೆ ರು. 12 ಲಕ್ಷ ವ್ಯಯಿಸುವುದಾದರೆ, ಇನ್ನೂ 2 ಶೌಚಾಲಯಗಳ ನವೀಕರಣ ಬಾಕಿ ಇದೆ. ಇದು ಸಾರ್ವಜನಿಕರ ತೆರಿಗೆ ಹಣವನ್ನು ವೃಥಾ ಪೋಲು ಮಾಡುವ ಕ್ರಮವಲ್ಲದೆ ಮತ್ತೇನಿಲ್ಲ ಎನ್ನುವುದು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತ ಕಾಮತ್ ಅಭಿಪ್ರಾಯ.