ಯುಕೆ ಅಟ್ಲಾಂಟಾ ಸಾಫ್ಟ್ವೇರ್ ಸಂಸ್ಥೆ ಉದ್ಘಾಟನೆ ಇಂದು
ಮಂಗಳೂರು: ಯುನೈಟೆಡ್ ಕಿಂಗ್ಡಮ್ ಮೂಲದ ಅಟ್ಲಾಂಟಿಕ್ ಡಾಟಾ ಬ್ಯೂರೊ ಮಂಗಳೂರಿನ ಕಣ್ಣೂರಲ್ಲಿ ಫೆ.1ರಂದು ಆರಂಭಿಸಲಿದೆ. ಸಾಫ್ಟ್ವೇರ್ ಸಂಸ್ಥೆಗೆ ಬ್ರಿಟಿಷ್ ಪ್ರಜೆಗಳೇ ಗ್ರಾಹಕರು. ಆದರೆ ಕರಾವಳಿ ಕನ್ನಡಿಗರಿಗೆ ಇದರಿಂದ ವಿಫುಲ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಯುನೈಟೆಡ್ ಕಿಂಗ್ಡಮ್ ಮಾರ್ಕ್ ಫಾಲೆಟ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅಟ್ಲಾಂಟಿಕ್ ಡಾಟಾ ಬ್ಯೂರೊ ಯುಕೆಯಲ್ಲಿ 2000ದಲ್ಲಿ ಆರಂಭವಾಗಿದ್ದು, ಮಂಗಳೂರಿನ ಪಂಪ್ವೆಲ್ನಲ್ಲಿ 2005ರಿಂದ ಕಾರ್ಯಾಚರಿಸುತ್ತಿದೆ. ವಿದೇಶಿ ಎಂಜಿನಿಯರ್ಗಳ ಜತೆ ಮಂಗಳೂರಿನ ಜನರಿಗೂ ಅವಕಾಶ ಕಲ್ಪಿಸಲಾಗಿದೆ. ಪದವಿ ಮುಗಿಸಿದ ಕುಶಾಗ್ರಮತಿಗಳಿಗೂ ಅವಕಾಶ ನೀಡಲಾಗುತ್ತದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ದೀಪಕ್ ಶರ್ಮ ಇದ್ದರು.
ಇಂದು 'ಕನ್ನಡದಲ್ಲಿ ಕುರ್ಆನ್' ಬಿಡುಗಡೆ
ಮಂಗಳೂರು: ಬೆಂಗಳೂರಿನ ಮಾಧ್ಯಮ ಪ್ರಕಾಶನ ಪ್ರಕಟಿಸಿದ 'ಕನ್ನಡದಲ್ಲಿ ಕುರ್ಆನ್' ಅನುವಾದ ಗ್ರಂಥದ ದ್ವಿತೀಯ ಆವೃತ್ತಿ ಬಿಡುಗಡೆ ಸಮಾರಂಭ ಫೆ.1ರಂದು ನಗರದ ಪುರಭವನದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂ ಫಾರ್ ಹ್ಯುಮಾನಿಟಿ ಅಧ್ಯಕ್ಷ ಡಾ.ಸಿ.ಪಿ.ಹಬೀಬುರ್ರಹ್ಮಾನ್, ಸಂಜೆ 6.45ಕ್ಕೆ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಯೇನೆಪೋಯ ವಿಶ್ವವಿದ್ಯಾಲಯ ಕುಲಪತಿ ವೈ.ಅಬ್ದುಲ್ಲಾ ಕುಂಞ, ಮಂಗಳೂರು ಧರ್ಮಪ್ರಾಂತ್ಯ ವಿಕಾರ್ ಜನರಲ್ ರೆ.ಫಾ.ಮೊನ್ಸಿಂಜೋರ್ ಡೆನಿಸ್ ಪ್ರಭು ಭಾಗವಹಿಸಲಿದ್ದಾರೆ.