ಆಧ್ಯಾತ್ಮಿಕತೆಯಿಂದ ಯಶಸ್ಸು ಪ್ರಾಪ್ತಿ: ಶ್ರೀ
ಮಂಗಳೂರು: 'ಆಧುನಿಕ ಶಿಕ್ಷಣ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿದ್ದಾಗ ಬದುಕಿನಲ್ಲಿ ಯಶಸ್ಸು ಪ್ರಾಪ್ತಿ' ಎಂದು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ 72ನೇ ಪೀಠಾಧಿಪತಿ ನಿರ್ಮಾಲಾನಂದನಾಥ ಸ್ವಾಮೀಜಿ ಹೇಳಿದರು. ಕಾವೂರಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದಲ್ಲಿ ಸೋಮವಾರ ನಡೆದ ಗುರುನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವ ಜೀವಿ ಅಪಾರ ಶಕ್ತಿಯ ಆಗರ. ಸಂಸ್ಕಾರ, ಸಂಸ್ಕೃತಿಯ ಅರಿವಿಲ್ಲದ ಶಿಕ್ಷಣ ಸುಸಂಸ್ಕೃತ ಮಾನವ ನಿರ್ಮಾಣಕ್ಕೆ ಪೂರಕವಲ್ಲ. ಬಾಲಗಂಗಾಧರನಾಥ ಸ್ವಾಮೀಜಿಯವರು ಶಿಕ್ಷಣದ ಜತೆಗೆ ವಿದ್ಯೆ ಮತ್ತು ಆರೋಗ್ಯ ಸುಭೀಕ್ಷೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು ಎಂದರು. ಕಾವೂರು ಆದಿಚುಂಚನಗಿರಿ ಮಂಗಳೂರು ಶಾಖಾಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿಯವರು ಪೀಠಾಧಿಪತಿ ಆಗುವ ಮೊದಲು ಕೇವಲ 2 ವಿದ್ಯಾಸಂಸ್ಥೆಗಳಿದ್ದು, ಈಗ 450ಕ್ಕೆ ಏರಿದೆ. ಸುಮಾರು 1.10 ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಪರಿಸರ ಸಂರಕ್ಷಣೆಗಾಗಿ 5 ಕೋಟಿ ಗಿಡಗಳನ್ನು ಬೆಳೆಸಿದ್ದಾರೆ ಎಂದರು.