ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಂಡೋ ಸಂತ್ರಸ್ತ ಗರ್ಭಿಣಿಯರ ಸ್ಕ್ಯಾನಿಂಗ್ ಇಲ್ಲ: ಖಂಡನೆ

Vishwanath S
Updated On : 2 Jul 2013, 11:28 am

ಉಪ್ಪಿನಂಗಡಿ: ಎಂಡೋ ಪೀಡಿತ ವಲಯದ ಗರ್ಭಿಣಿಯರ ಉಚಿತ ಸ್ಕ್ಯಾನಿಂಗ್ ಪರೀಕ್ಷೆ ಮಾಡುವ ಕಾರ್ಯವನ್ನು ಸ್ವಯಂ ಸೇವಾ ಸಂಘ ಸಂಸ್ಥೆಗಳು ಮಾಡಲು ಮುಂದಾಗಿವೆ. ಆದರೂ ಸಚಿವರ ಆದೇಶದನ್ವಯ ಈ ಲಭ್ಯತೆಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ತಡೆ ಹಿಡಿದ ಕೃತ್ಯವನ್ನು ಕೊಕ್ಕಡ ಎಂಡೋ ಪೀಡಿತರ ಪರ ಹೋರಾಡುತ್ತಿರುವ ಶ್ರೀಧರ ಗೌಡ ಖಂಡಿಸಿದ್ದಾರೆ.
 ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಶ್ರೀಧರ ಗೌಡ, ಎಂಡೋ ಸಂತ್ರಸ್ತರು ಹಲವಾರು ವರ್ಷಗಳಿಂದ ಸರ್ಕಾರವನ್ನು ಮತ್ತು ಆರೋಗ್ಯ ಇಲಾಖೆಯನ್ನು ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ನೀಡುವುದರೊಂದಿಗೆ ಮುಂದೆ ಇಂಥ ಸಮಸ್ಯೆಗಳು ಬಾರದಂತೆ ತಡೆಯುವ ನಿಟ್ಟಿನಲ್ಲಿ ಗರ್ಭಿಣಿಯರ ಉಚಿತ ಸ್ಕ್ಯಾನಿಂಗ್ ಮತ್ತು ಅವಿವಾಹಿತರ ವಂಶವಾಹಿ ಪರೀಕ್ಷೆಯನ್ನು ನಡೆಸಬೇಕು ಎಂದು ಆಗ್ರಹಿಸುತ್ತಾ ಬಂದಿದ್ದಾರೆ. ಆದರೆ, ಸರ್ಕಾರ ಸ್ಪಂದಿಸದಿದ್ದಾಗ ಸಂತ್ರಸ್ತರು ಎಂಡೋಸಲ್ಫಾನ್ ಸಂತ್ರಸ್ತರ ಹಿತರಕ್ಷಣಾ ಪ್ರತಿಷ್ಠಾನ ಉಡುಪಿ ಮತ್ತು ರೋಟರಿ ಕ್ಲಬ್ ಪುತ್ತೂರು ಇವರಲ್ಲಿ ತಮ್ಮ ಕಳಕಳಿಯನ್ನು ತೋಡಿಕೊಂಡಾಗ ಮಾನವೀಯ ಮೌಲ್ಯಗಳನ್ನು ಮೆರೆದು ಅಪಾರ ಖರ್ಚನ್ನು ಭರಿಸಿ, ಈ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಈಗ ಆರೋಗ್ಯ ಸಚಿವರ ಸೂಚನೆ ಮೇರೆಗೆ ಈ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ತಡೆಹಿಡಿಯಲು ಆದೇಶಿಸಿರುವುದು ಎಂಡೋ ಪೀಡಿತರ ಬದುಕಿನಲ್ಲಿ ಚೆಲ್ಲಾಟವಾಡಿದಂತಾಗಿದೆ ಎಂದು ಆರೋಪಿಸಿದ್ದಾರೆ.
 ಭಾನುವಾರ ಮುಂಜಾನೆ ಉದ್ಘಾಟನೆಗೊಂಡ ಉಚಿತ ಸ್ಕ್ಯಾನಿಂಗ್ ನಿರಂತರ ತಪಾಸಣಾ ಕಾರ್ಯಕ್ರಮ ಭಾನುವಾರ ಸಂಜೆ ಆರೋಗ್ಯಾಧಿಕಾರಿಯವರ ಆದೇಶದಂತೆ ತಡೆಹಿಡಿಯಲ್ಪಟ್ಟಿದೆ. ಸರ್ಕಾರದಿಂದಲೇ ಮಾಡಬೇಕಾದ ಈ ಬೃಹತ್ ವ್ಯವಸ್ಥೆಯನ್ನು ಮಾಡಲಾಗದೆ ಸ್ವಯಂ ಸೇವಾ ಸಂಘಟನೆಗಳು ಮಾಡಲು ಹೊರಟಿರುವುದನ್ನು ನೋಡಿ ಹತಾಶೆಗೊಂಡು ಈ ಆದೇಶ ಸರ್ಕಾರದಿಂದ ಬಂದಿರಬೇಕೆಂದು ಶ್ರೀಧರ ಗೌಡ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement