'ಪುತ್ತಿಗೆ ಶೈಲಿ' ಮುಂದುವರಿಯಲಿ: ಸಂಸದ ನಳಿನ್
ಮಂಗಳೂರು: ಯಕ್ಷಗಾನ ಭಾಗವತಿಕೆಯಲ್ಲಿ ಪುತ್ತಿಗೆ ಶೈಲಿ ಛಾಪು ಮೂಡಿಸಿದ ಭಾಗವತ ರಘುರಾಮ ಹೊಳ್ಳರು ಪರಂಪರೆ ಉಳಿಸಿಕೊಂಡು ಮುನ್ನಡೆಯಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆಶಿಸಿದರು.
ಮಂಗಳೂರು ಪುರಭವನದಲ್ಲಿ ಭಾನುವಾರ, ಮೂರು ದಿನಗಳ ಕಾಲ ನಡೆದ 'ರಘುರಾಮಾಭಿನಂದನಮ್' ಕಾರ್ಯಕ್ರಮ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಗರಿ, ಬಲಿಪ ಪರಂಪರೆಯಂತೆ ಪುತ್ತಿಗೆ ಪರಂಪರೆ ಪ್ರಸಿದ್ಧಿಯನ್ನು ರಘುರಾಮ ಹೊಳ್ಳರು ಮುಂದುವರಿಸಿದ್ದಾರೆ. ಕೇವಲ ಭಾಗವತನಾಗದೆ, ಚಂಡೆ, ಮದ್ದಳೆ, ಅರ್ಥಗಾರಿಕೆಯಲ್ಲೂ ಪುತ್ತಿಗೆ ಹೊಳ್ಳರು ಕೈಯಾಡಿಸಿದ್ದಾರೆ.
ಅವರ ಕಂಠಶ್ರೀ ಇನ್ನಷ್ಟು ಕಾಲ ಹೊರಹೊಮ್ಮಲಿ ಎಂದು ಹಾರೈಸಿದರು. ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ, ಮೊಕ್ತೇಸರ ವಾಸುದೇವ ಆಸ್ರಣ್ಣ, ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಪಿ.ಜಯರಾಮ ಭಟ್, ಶ್ರೀಕಟೀಲು ಮೇಳಗಳ ಸಂಚಾಲಕ ದೇವಿಪ್ರಸಾದ್ ಶೆಟ್ಟಿ, ರಘುರಾಮಾಭಿನಂದನಮ್ ಸಮಿತಿ ಗೌರವಾಧ್ಯಕ್ಷ ಟಿ. ಶ್ಯಾಮ ಭಟ್, ಅಧ್ಯಕ್ಷ ಹರಿಕೃಷ್ಣ ಪುನರೂರು ಹಾಜರಿದ್ದರು.