ಪೆರಾಜೆಯಲ್ಲಿ ರಾಘವೇಶ್ವರ ಶ್ರೀ ವಿಜಯ ಚಾತುರ್ಮಾಸ್ಯ
ಕ.ಪ್ರ.ವಾರ್ತೆ , ಮಂಗಳೂರು , ಜು. 7
ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ವಿಜಯ ಚಾತುರ್ಮಾಸ್ಯವನ್ನು ಪುತ್ತೂರು ಬಳಿಯ ಪೆರಾಜೆ ಮಾಣಿ ಶ್ರೀರಾಮಚಂದ್ರಾಪುರ ಮಠದಲ್ಲಿ ಕೈಗೊಳ್ಳಲಿದ್ದಾರೆ. ಜು.22ರಿಂದ ಸೆ.19ರ ವರೆಗೆ 60 ದಿನಗಳ ಕಾಲ ನಡೆಯುವ ಈ ಚಾತುರ್ಮಾಸ್ಯ ರಾಘವೇಶ್ವರ ಶ್ರೀಗಳಿಗೆ 20ನೇಯದು.
ಇಲ್ಲಿನ ಹನುಮನ ಸನ್ನಿಧಿಯಲ್ಲಿ ಈ ಚಾತುರ್ಮಾಸ್ಯ ಜರುಗುವುದರಿಂದ ಇದು ಹನುಮನಿಗೆ ಸಮರ್ಪಿತವಾಗಲಿದೆ. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಚಾತುರ್ಮಾಸ್ಯದ 60 ದಿನದಲ್ಲಿ ಆಂಜನೇಯ ಸೇವೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಜು.28ರಿಂದ ಆ.3ರವರೆಗೆ, ಆ.11ರಿಂದ 17ರವರೆಗೆ, ಸೆ.1ರಿಂದ 7ರವರೆಗೆ ಸಂಜೆ 6ರಿಂದ ರಾಮಕಥಾ ಏರ್ಪಡಲಿದೆ. ಸೆ.19ರಂದು ಶ್ರೀಗಳು ಸೀಮೋಲ್ಲಂಘನೆ ಮಾಡುವರು. ಆ.28ರಂದು ಶ್ರೀಕೃಷ್ಣಾಷ್ಟಮಿ, ಸೆ.9ರಂದು ಗಣೇಶ ಚತುರ್ಥಿ ಆಚರಣೆಯಾಗಲಿದೆ. ಆ.10ರಂದು ವೈದಿಕ ಸಮಾವೇಶ ನಡೆಯಲಿದೆ.
ರಾಘವೇಶ್ವರಶ್ರೀಗಳ ಪುರಪ್ರವೇಶ ಸಂದರ್ಭ ಜು.20ರಂದು ಕಲ್ಲಡ್ಕ ಉಮಾಶಿವ ಕ್ಷೇತ್ರದಲ್ಲಿ ಭವ್ಯ ಸ್ವಾಗತ, ಬಳಿಕ ಮಾಣಿ ಮಠಕ್ಕೆ ವಾಹನ ಮೆರವಣಿಗೆ. 22ರಿಂದ ಚಾತುರ್ಮಾಸ್ಯ ಸಂಕಲ್ಪ ನಡೆಸುವರು. ಇದೇ ವೇಳೆ ವಿವಿಧ ವಲಯಗಳಿಂದ ಮಠಕ್ಕೆ ಹೊರೆಕಾಣಿಕೆ ಹರಿದುಬರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ವಿವರಕ್ಕೆ ಪೆರಾಜೆ ಮಾಣಿ ಮಠವನ್ನು ಸಂಪರ್ಕಿಸಬಹುದು.(08255-274318/ 9449487052).