ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೂಡುಬಿದಿರೆ ಬಸದಿ ದರೋಡೆ: ಶಂಕಿತನ ರೇಖಾಚಿತ್ರ ಬಿಡುಗಡೆ

Vishwanath S
Updated On : 8 Jul 2013, 1:34 am

ಮಂಗಳೂರು: ಮೂಡುಬಿದಿರೆ ಗುರು ಬಸದಿಯ ಸಿದ್ಧಾರ್ಥ ಮಂದಿರದಿಂದ ಶುಕ್ರವಾರ ಕೋಟ್ಯಂತರ ರುಪಾಯಿ ಮೌಲ್ಯದ ತೀರ್ಥಂಕರರ 15 ವಿಗ್ರಹಗಳನ್ನು ದರೋಡೆ ಮಾಡಿರುವ ಶಂಕಿತ ಆರೋಪಿಯ ರೇಖಾಚಿತ್ರವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಮನೀಷ್ ಕರ್ಭೀಕರ್ ಬಿಡುಗಡೆ ಮಾಡಿದ್ದಾರೆ.
ಭಾನುವಾರ ಮೂಡುಬಿದಿರೆ ಠಾಣೆಯಲ್ಲಿ ಇದನ್ನು ಬಿಡುಗಡೆ ಮಾಡಿದ ಕರ್ಭಿಕರ್, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವಾತ 30 ವರ್ಷ ವಯಸ್ಸಿನಂತೆ, ಮೂಲತಃ ಗುಜರಾತ್ ಅಥವಾ ರಾಜಸ್ಥಾನದವನಂತೆ ಕಾಣುತ್ತಿದ್ದಾನೆ. ಬಿಳಿ ಬಣ್ಣದ ದೃಢಕಾಯದ ವ್ಯಕ್ತಿ ಕಳೆದ 2 ದಿನಗಳಿಂದ ಮೂಡುಬಿದಿರೆ ವ್ಯಾಪ್ತಿಯಲ್ಲಿ ಧರ್ಮಸ್ಥಳಕ್ಕೆ ದಾರಿ ಕೇಳುತ್ತಿದ್ದ ಎಂದು ತಿಳಿಸಿದ್ದಾರೆ.
ಐದು ತಂಡ ರಚನೆ: ಈ ಮಂದಿರದಲ್ಲಿ ಒಟ್ಟು 52 ತೀರ್ಥಂಕರರ ಮೂರ್ತಿಗಳಿದ್ದು, 15 ಮೂರ್ತಿಗಳನ್ನು ಕಳವು ಮಾಡಲಾಗಿದೆ. ಆರೋಪಿಗಳನ್ನು ಹಿಡಿಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ 5 ತಂಡ ರಚಿಸಿದ್ದು, ಕಾರ್ಯಾಚರಣೆ ಆರಂಭಿಸಿದೆ. ಅಲ್ಲದೆ ಹೊರ ರಾಜ್ಯಗಳಿಗೂ ಮಾಹಿತಿ ರವಾನಿಸಿ ತನಿಖೆ ನಡೆಸುವಂತೆ ತಿಳಿಸಲಾಗಿದೆ.  ಸಿದ್ಧಾರ್ಥ ಮಂದಿರದಿಂದ ರಾತ್ರಿ 1.10ರ ಸುಮಾರಿಗೆ ಪ್ರತಿಮೆ ಕದ್ದ ಆರೋಪಿ ಯಾವ ಕಡೆಗೆ ತೆರಳಿದ್ದಾನೆ ಎಂಬುದು ಗೊತ್ತಾಗಿಲ್ಲ. ಆದರೆ ಅದೇ ದಿನ ನಸುಕಿನ ಜಾವ 4 ಗಂಟೆಗೆ ಹಿಂದಿಯಲ್ಲಿ ಮಾತನಾಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಆಟೋರಿಕ್ಷಾದಲ್ಲಿ ಬೆಳ್ತಂಗಡಿ ಕಡೆ ಹೋಗಿದ್ದಾನೆ ಎನ್ನಲಾಗಿದೆ.
ಇದು ಮೂರನೇ ಪ್ರಕರಣ: ಜೂ.15ರಂದು ರಾತ್ರಿ ಬೆಳ್ತಂಗಡಿ ನೆರಿಯ ಬೈಲು ಪಾರ್ಶ್ವನಾಥ ಬಸದಿಯಲ್ಲಿ ತೀರ್ಥಂಕರರ 19, ಪದ್ಮಾವತಿ ದೇವಿಯ ಒಂದು ವಿಗ್ರಹ ಕಳವಾಗಿದ್ದವು. ಇದಾದ ಎರಡನೇ ದಿನಗಳಳ್ಲಿ ಬಂಗಾಡಿ ಚತುರ್ವಿಂಶತಿ ಬಸದಿ ಮತ್ತು ಪದ್ಮಪ್ರಭ ತೀರ್ಥಂಕರ ಬಸದಿಯಲ್ಲಿ ವಿಗ್ರಹ ಕಳವಾಗಿತ್ತು. ಈ ಎರಡು ಕಡೆ ಕಳ್ಳತನ ನಡೆಸಿದ ಆರೋಪಿಗಳೇ ಮೂಡುಬಿದಿರೆ ಜೈನ ಬಸದಿಗೂ ಕನ್ನ ಹಾಕಿರುವ ಬಗ್ಗೆ ಜಿಲ್ಲಾ ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಪೊಲೀಸ್ ಭದ್ರತೆ: ದರೋಡೆ ಹಿನ್ನಲೆಯಲ್ಲಿ ಸಿದ್ಧಾರ್ಥ ಮಂದಿರ ಮತ್ತು ಗುರು ಬಸದಿಗೆ ಹೆಚ್ಚುವರಿ 8 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಶನಿವಾರ ಬಸದಿಗೆ ಭೇಟಿ ನೀಡಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಭಾನುವಾರವೂ ಆಗಮಿಸಿ, ಬಸದಿ ಮೊಕ್ತೇಸರರ ಜತೆ ಎಲ್ಲ ಬಸದಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement