ಪತ್ನಿ ಕತ್ತು ಹಿಸುಕಿ ಕೊಲೆಗೈದ ಪತ್ರಕರ್ತ
ಕ.ಪ್ರ. ವಾರ್ತೆ, ಮಂಗಳೂರು, ಜು.15
ಅನೈತಿಕ ಸಂಪರ್ಕ ವಿಚಾರದಲ್ಲಿ ಗಲಾಟೆ ನಡೆದು ಪತ್ರಕರ್ತ ಗಂಗಾಧರ ಪಡುಬಿದ್ರಿ ತನ್ನ ಪತ್ನಿ ಮಮತಾ ಶೆಟ್ಟಿ (32)ಯನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಇಲ್ಲಿಯ ಕೊಟ್ಟಾರ-ಕೋಡಿಕಲ್ ಬಳಿಯ ಪ್ರಶಾಂತ ನಿಲಯದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಆರೋಪಿ ಗಂಗಾಧರ ಪಡುಬಿದ್ರಿ (40) ದೂರದರ್ಶನ ವಾಹಿನಿಗೆ ಸುದ್ದಿಸಂಗ್ರಾಹಕನಾಗಿ ಕೆಲಸ ಮಾಡುತ್ತಿದ್ದ. ಕೊಲೆಯಾದ ಮಮತಾ ಶೆಟ್ಟಿ ಪ್ರತಿಷ್ಠಿತ ಎಸ್ಡಿಎಂ ಕಾನೂನು ವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕಿಯಾಗಿದ್ದರು.
ಎಂದಿನಂತೆ ದಂಪತಿ ನಡುವೆ ಸೋಮವಾರವೂ ಗಲಾಟೆ ನಡೆದಿದೆ. ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದು, ಆಕ್ರೋಶಗೊಂಡ ಪತಿ ಪತ್ನಿಯ ಕತ್ತು ಹಿಸುಕಿದ್ದಾನೆ. ಬಳಿಕ ತನ್ನ ಅಣ್ಣನಿಗೆ ಕರೆ ಮಾಡಿದ, ಗಂಗಾಧರ್ ಗಲಾಟೆ ನಡೆದ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಅಣ್ಣ ರೋಹಿಣಾನಂತ ಸ್ವಾಮಿ ಮಮತಾ ನಿರ್ಜೀವವಾಗಿ ಬಿದ್ದಿರುವುದನ್ನು ಗಮನಿಸಿ, ಉರ್ವ ಪೊಲೀಸರಿಗೆ ಕರೆ ಮಾಡಿ ತಿಳಿಸಿದರು.
ಸ್ಥಳಕ್ಕೆ ಡಿಸಿಪಿ ಧರ್ಮಯ್ಯ, ಉರ್ವ ಪೊಲೀಸ್ ಠಾಣೆ ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್ ಆಗಮಿಸಿ ತನಿಖೆ ನಡೆಸಿದರು.