ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಡ್ಯನಡ್ಕ: ರಸ್ತೆ ಕಾಮಗಾರಿ ಅವ್ಯವಸ್ಥೆ

Lingaraj Badiger
Updated On : 19 Jul 2013, 12:31 pm

ವಿಟ್ಲ: ಕರ್ನಾಟಕ- ಕೇರಳ ಗಡಿ ಪ್ರದೇಶದಲ್ಲಿರುವ ಅಡ್ಯನಡ್ಕ ಬಳಿ ರಸ್ತೆಗೆ ಲೋಕೋಪಯೋಗಿ ಇಲಾಖೆ ಮೋರಿ ಅಳವಡಿಸಲು ಮುಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ.
ಅಡ್ಯನಡ್ಕ ಪೇಟೆಯ ಮಾನಸ ಕಲಾಕುಂಜ ಮುಂಭಾಗದಲ್ಲಿದ್ದ ಮೋರಿ ಕುಸಿತಕ್ಕೊಳಗಾಗಿ ಅದರಲ್ಲಿ ಮಣ್ಣು ತುಂಬಿತ್ತು. ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ಹರಿದು, 2-3 ಅಪಘಾತಗಳಿಗೂ ಕಾರಣವಾಗಿತ್ತು. ಈ ನಡುವೆ ಗ್ರಾಮಸ್ಥರು ಒತ್ತಡ ಹೇರಿದ ಬಳಿಕ ಲೋಕೋಪಯೋಗಿ ಇಲಾಖೆ ಟೆಂಡರ್ ಪ್ರಕ್ರಿಯೆ ನಡೆಸಿತ್ತು. ಟೆಂಡರ್ ಪಡೆದ ಗುತ್ತಿಗೆದಾರ ಬುಧವಾರ ರಾತ್ರಿ ಮೋರಿ ಹಾಕುವ ಕಾರ್ಯಕ್ಕೆ ಮುಂದಾಗಿದ್ದರು. ಸುರಿಯುತ್ತಿರುವ ಮಳೆ ಮತ್ತು ವಾಹನಗಳ ಸಂಚಾರದಿಂದ ಮೋರಿಯ ಮೇಲೆ ಹಾಕಲಾದ ಮಣ್ಣು ಕೆಸರಾಗಿ ಸಂಚಾರ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಯಿತು. ಗುರುವಾರ ಮಧ್ಯಾಹ್ನ ಇಲ್ಲಿ ಸಂಚರಿಸುತ್ತಿದ್ದ ಲಾರಿಯೊಂದರ 'ಜಾಯಿಂಟ್‌' ತುಂಡಾಗಿ ಮಣ್ಣು ಹಾಕಲಾದ ಜಾಗದಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ಥಗೊಂಡಿತು. ಇದರಿಂದ ವಿಟ್ಲ ಕುದ್ದುಪದವು- ಪೆರ್ಲ ಕಡೆಗೆ ಸಾಗಬೇಕಾದ ಹಲವಾರು ವಾಹನಗಳು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
--
ಆಸನ ಕೊರತೆ: 'ನಿಂತು' ನಡೆದ ಗ್ರಾಮಸಭೆ
ವಿಟ್ಲ:  ಗ್ರಾಮಸಭೆಯಲ್ಲಿ ನಿರೀಕ್ಷೆಗೂ ಮೀರಿದ ಜನ ಸೇರಿ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸಾಲದೆ ಅಧಿಕಾರಿಯೊಬ್ಬರ ಸೂಚನೆಯ ಮೇರೆಗೆ ಸಭೆಯಲ್ಲಿದ್ದ ಎಲ್ಲರೂ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಿಂತು  ಸಭೆ ನಡೆಸಿದ ಹೊಸ ಪ್ರಯೋಗ ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದಿದೆ!
 ನಿಗದಿಯಾದಂತೆ ಗ್ರಾಮ ಸಭೆ 2.30ಕ್ಕೆ ಪ್ರಾರಂಭವಾಗಬೇಕಿತ್ತು. ಆದರೆ, ಬದನಾಜೆಯಿಂದ ಕುಂಡಡ್ಕ ಮಾರ್ಗವಾಗಿ ಪರಿಯಾಲ್ತಡ್ಕ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ವಾಹನಗಳು ಸಂಚರಿಸಲು ಅಸಾಧ್ಯವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಸಭೆ ಪ್ರಾರಂಭವಾಗುವಾಗ 3.30 ಕಳೆದಿತ್ತು.
ಮೊದಲೇ ಸಭೆಗೆ ಬಂದವರು ಸ್ಥಳದಲ್ಲಿ ಹಾಕಿದ್ದ ಆಸನದಲ್ಲಿ ಆಸೀನರಾದರೆ, ಪ್ರತಿಭಟನೆ ಬಳಿಕ ಅಲ್ಲಿ ಸೇರಿದ್ದವರೆಲ್ಲರೂ ಸಭೆ ನಡೆಯುವಲ್ಲಿಗೆ ಬಂದಾಗ ಕೂರಲು ಜಾಗವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
 ಅದೇ ಸಮಯಕ್ಕೆ ಸರಿಯಾಗಿ ಮೊದಲೇ ಆಸೀರಾಗಿದ್ದ ವಯಸ್ಕರೊಬ್ಬರು ಕೂರಲು, ನಿಲ್ಲಲು ಜಾಗವಿಲ್ಲದಲ್ಲಿ ಏನು ಸಭೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಕೆಲ ಯುವಕರು ಗದ್ದಲವೆಬ್ಬಿಸಿದರು. ತಕ್ಷಣ ಮಧ್ಯ ಪ್ರವೇಶಿಸಿದ ನೋಡಲ್ ಅಧಿಕಾರಿ ಡಾ. ವಿಶ್ವನಾಥ ಶೆಟ್ಟಿ, 'ನಾವೆಲ್ಲರೂ ನಿಂತೇ ಸಭೆ ನಡೆಸೋಣ' ಎಂದು ಸಲಹೆ ನೀಡಿದರು.
ಇದಕ್ಕೆ ಒಪ್ಪಿದ ಎಲ್ಲರೂ ಹಾಕಲಾಗಿದ್ದ ಆಸನಗಳನ್ನು ಬದಿಗೆ ಹಾಕಿ ಸಭೆ ನಡೆಸಿದರು. ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಸರದಿಯಲ್ಲಿ ಜನರ ಪ್ರಶ್ನೆಗಳಗೆ ಉತ್ತರಿಸಿ ಸಭೆ ಮುಗಿಯುವಾಗ ಬರೋಬ್ಬರಿ ಸಂಜೆ ಆರು ಗಂಟೆಯಾಗಿತ್ತು.
ಜಿಲ್ಲಾ ಪಂಚಾಯಿತಿ ಸದಸ್ಯ ಚನ್ನಪ್ಪ ಕೋಟ್ಯಾನ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ, ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಶ್ಚಂದ್ರ ನಾಯಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement