ಕೇರಳಕ್ಕೆ ದನ ಸಾಗಾಟ ಯತ್ನ: ಸ್ಥಳೀಯರಿಂದ ತಡೆ
ವಿಟ್ಲ: ಪುಣಚ ಗ್ರಾಮದಿಂದ ಕೇರಳಕ್ಕೆ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ಸ್ಥಳೀಯರು ತಡೆಯೊಡ್ಡಿ, ಪೊಲೀಸರಿಗೆ ನೀಡಿದ್ದು ವಾಹನ ಮತ್ತು ಆರೋಪಿಯನ್ನು ವಶಕ್ಕೆ ಪಡೆದ ಘಟನೆ ಕೊಲ್ಲಪದವಿನ ಬೈರಿಕಟ್ಟೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಪಿಕಪ್ ವಾಹನದಲ್ಲಿ ದನಗಳನ್ನು ತುಂಬಿಸಿಕೊಂಡು ಕೊಲ್ಲಪದವು ರಸ್ತೆಯಲ್ಲಿ ತಂದು ಚೆಕ್ಕುತ್ತಿ, ಪಾಂಡಿಗಯ ಮೂಲಕ ಕೇರಳದ ಅಡ್ಕಸ್ಥಳಕ್ಕೆ ಯಾವುದೇ ಆತಂಕವಿಲ್ಲದೆ, ಅಡೆತಡೆಗಳಿಲ್ಲದೆ ಸಾಗಿಸುವ ಉಪಾಯವನ್ನು ಮಾಡಲಾಗುತ್ತಿತ್ತೆನ್ನಲಾಗಿದೆ. ಅದೇ ರಿತಿ ಹೇರಿಕೊಂಡು ಬರುತ್ತಿರುವುದನ್ನು ಸ್ಥಳೀಯರೊಬ್ಬರು ನೋಡಿದ್ದು ಅಕ್ಕಪಕ್ಕದವರಿಗೆ ತಿಳಿಸುವಷ್ಟರಲ್ಲಿ ಚಾಲಕನಿಗೆ ಈ ವಿಷಯ ತಿಳಿದು ಪಿಕಪ್‌ನ್ನು ದೂರದಲ್ಲಿ ನಿಲ್ಲಿಸಿ ದನಗಳನ್ನು ಹಗ್ಗ ಕಳಚಿ ಗುಡ್ಡಕ್ಕೆ ಬಿಡುವ ನಾಟಕವಾಡಿದ್ದಾನೆ. ಇದನ್ನು ಅರಿತ ಸ್ಥಳೀಯರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಮತ್ತು ಪೊಲೀಸರು ವಾಹನ ಮತ್ತು ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.