ರಾ. ಕ್ರೀಡಾಕೂಟ ಮಸ್ಕರೇನಸ್‌ಗೆ ದ್ವಿತೀಯ ಸ್ಥಾನ
ಉಡುಪಿ: ಬೆಂಗಳೂರು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಜರುಗಿದ 34ನೇ ನ್ಯಾಶನಲ್ ಮಾಸ್ಟರ್ಸ್ ಅಥ್ಲೆಟಿಕ್
ಚಾಂಪಿಯನ್‌ಶಿಪ್- 2013 ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಇಲ್ಲಿನ ಬೆಳ್ಮಣ್‌ನ ಗ್ರೆಟ್ಟಾ ಮಸ್ಕರೇನಸ್ ಕರ್ನಾಟಕವನ್ನು ಪ್ರತಿನಿಧಿಸಿ 40 ಪ್ಲಸ್ ವಯೋವಾನದ ವಿಭಾಗದಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರು ಕಾರ್ಕಳ ವಲಯದ ಬೆಳ್ಮಣ್ ಹೊಸ್ಮಾರು ಸ. ಪ್ರಾ. ಶಾಲಾ ಶಿಕ್ಷಕಿಯಾಗಿದ್ದಾರೆ.
--
ರಾಜಕೀಯ ಪ್ರೇರಿತ ಐಟಿ ದಾಳಿ: ನಳಿನ್
ಮಂಗಳೂರು: ಮಠ ಮಂದಿರಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸುವ ಮೂಲಕ ಸರ್ಕಾರ ಮಠಗಳ ವಿರುದ್ಧ ಸಮರ ಸಾರುತ್ತಿದ್ದು, ರಾಜಕೀಯ ಪ್ರೇರಿತ ಸರ್ಕಾರದ ಕಾರ್ಯ ಸರಿಯಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಬಿಜಿಎಸ್ ಮೆಡಿಕಲ್ ಕಾಲೇಜಿನ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ದುರುದ್ದೇಶಪೂರಿತ. ಮಠಗಳನ್ನು ರಕ್ಷಿಸುವ ಹಾಗೂ ಪೋಷಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಅವುಗಳು ನಡೆಸುವ ಜನಪರ ಕೆಲಸಗಳಿಗೆ ದಾಳಿ ನಡೆಸಿ ಕಿರುಕುಳ ನೀಡುವುದು ಸರಿಯಲ್ಲ. ಇದನ್ನು ಉಗ್ರವಾಗಿ ಖಂಡಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.