ವಿಟ್ಲ ಪ್ರ.ದ. ಕಾಲೇಜ್‌ಗೆ ವಿ.ವಿ. ಪ್ರಭಾರ ಜಂಟಿ ನಿರ್ದೇಶಕ ಭೇಟಿ
ವಿಟ್ಲ: ಮಂಗಳೂರು ವಿ.ವಿ. ಯ ಪ್ರಭಾರ ಜಂಟಿ ನಿರ್ದೇಶಕ ರಾಧಾಕೃಷ್ಣ ಅವರು ಗುರುವಾರ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ, ಎಂ.ಎಸ್.ಡಬ್ಲ್ಯೂ. ವಿದ್ಯಾರ್ಥಿಗಳನ್ನು ಗುರುವಾರ ಸ್ವತಃ ತರಗತಿಗೆ ದಾಖಲಿಸಿ, ಹಲವು ದಿನಗಳಿಂದ ವಿವಾದಕ್ಕೆ ಕಾರಣವಾಗಿದ್ದ ಸಮಸ್ಯೆಗೆ ಅಂತ್ಯಹಾಡಿದರು.
ವಿದ್ಯಾರ್ಥಿಗಳ ಹೆತ್ತವರು ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಕಾನೂನು ಬಾಹಿರ ಕ್ರಮದ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳುಗಳಿಂದ ಭಾರಿ ವಿವಾದವನ್ನು ಉಂಟು ಮಾಡಿದ್ದ ಎಂ.ಎಸ್.ಡಬ್ಲ್ಯೂ. ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ನಿರಾಕರಿಸಿದ್ದರು.
ಕಾಲೇಜು ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳು, ಉಪನ್ಯಾಸಕರು ಸಂಬಂಧಪಟ್ಟವರಿಗೆ ನಿರಂತರ ದೂರು ನೀಡುತ್ತಲೇ ಬಂದಿದ್ದಾರೆ. ಇದೀಗ ಪ್ರಭಾರ ಜಂಟಿ ನಿರ್ದೇಶಕರು ಸುಮಾರು 3 ಗಂಟೆಗಳ ಕಾಲ ವಿಚಾರಿಸಿ, ನಾನಾ ಕಡತಗಳನ್ನು ಪರಿಶೀಲಿಸಿದರು.
ಪ್ರಾಂಶುಪಾಲರ ಬಗೆಗಿನ ಎಲ್ಲಾ ದೂರುಗಳನ್ನು ಪರಿಶೀಲಿಸಿದ ನಿರ್ದೇಶಕರು, ಎಲ್ಲಾ ಸಮಸ್ಯೆಗಳನ್ನು ಒಂದೆರಡು ದಿನಗಳಲ್ಲಿ ಪರಿಹರಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.