ಸುಬ್ಬಯ್ಯ ನಾಯ್ಕ್ ನೆನಪಿಗೆ ಸಂಘಟನೆ: 28ರಂದು ಪೂರ್ವಭಾವಿ ಸಭೆ
ಮಂಗಳೂರು: ಸುಳ್ಯದ ಪ್ರಥಮ ಶಾಸಕ ದಿ.ಎಸ್. ಸುಬ್ಬಯ್ಯ ನಾಯ್ಕ್ ಅವರ ನೆನಪು ಶಾಶ್ವತವಾಗಿರಿಸಲು ಸಂಘಟನೆಯೊಂದನ್ನು ಸ್ಥಾಪಿಸಲು ನಿರ್ಧರಿಸಿದ್ದು, ಇದರ ಪೂರ್ವಭಾವಿ ಸಭೆ ಜು. 28 ರಂದು ಹಿರಿಯರ ಮನೆ, ಕಾನತ್ತಿಲ ರಸ್ತೆ, ಜಟಿಪಳ್ಳದಲ್ಲಿ ನಡೆಯಲಿದೆ. ಸುಬ್ಬಯ್ಯ ನಾಯ್ಕ್ ಅವರು 1957 ರಿಂದ 1967ರವರೆಗೆ ಶಾಸಕರಾಗಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದರು. ಇವರ ನೆನಪಿಗಾಗಿ ಸಂಘಟನೆಯ ಮೂಲಕ ಬಡ ವಿದ್ಯಾರ್ಥಿಗಳಿಗೆ ಸವಲತ್ತು ಹಾಗೂ ಉದ್ಯೋಗವಕಾಶ ಹೆಚ್ಚಿಸಲು ಪ್ರಯತ್ನ ಮಾಡಲಾಗುವುದು. ಬೆಳಗ್ಗೆ 10.30 ರಿಂದ ಮಧ್ಯಾಹ್ನ 12ರವರೆಗೆ ನಡೆಯುವ ಸಭೆಯಲ್ಲಿ ವಿದ್ಯಾರ್ಥಿಗಳು, ಅಭಿಮಾನಿಗಳು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಂಕಿತ ಡೆಂಘೀಗೆ ಮಹಿಳೆ ಬಲಿ
ಮಂಗಳೂರು: ಕೊಣಾಜೆ ಅಸೈಗೋಳಿ ನಿವಾಸಿ, ಕೆಎಸ್‌ಆರ್‌ಪಿ 7ನೇ ಬೆಟಾಲಿಯನ್‌ನ ಹೆಡ್ ಕಾನ್‌ಸ್ಟೇಬಲ್ ಜೋಸೆಫ್ ಅಪೋಸ್‌ರ ಪತ್ನಿ ಜೂಲಿಯೆಟ್ ಮಸ್ಕರೇನಸ್ (52)ಶಂಕಿತ ಡೆಂಘೀ ಜ್ವರದಿಂದ ಗುರುವಾರ ಮೃತಪಟ್ಟಿದ್ದಾರೆ.
ಮೂರು ದಿನದ ಹಿಂದೆ ಜ್ವರದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ರಕ್ತ ಪರೀಕ್ಷೆ ಮಾಡಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಮೂಲತಃ ಕಾರವಾರದವರಾದ ಇವರು ಕಳೆದ 15 ವರ್ಷದಿಂದ ಅಸೈಗೋಳಿಯಲ್ಲಿದ್ದರು. ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಇಂದು ವೈದ್ಯಕೀಯ ಕಾರ್ಯಾಗಾರ
ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ವೈದ್ಯಕೀಯ ಶಿಕ್ಷಣ ಘಟಕದ ವತಿಯಿಂದ ಜು. 19 ಮತ್ತು 20 ರಂದು ಕಾಲೇಜಿನ ಸಭಾಂಗಣದಲ್ಲಿ 'ಶೈಕ್ಷಣಿಕ ನಾಯಕತ್ವದ ಕಲಿಕೆಯ ಉಪಕ್ರಮ' ಎಂಬ ವಿಷಯದಲ್ಲಿ ಕಾರ್ಯಾಗಾರ ನಡೆಯಲಿದೆ. ಕೊಯಮತ್ತೂರು ಪಿಎಸ್‌ಜಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ರಾಮಲಿಂಗಂ ಶಂಕರನ್, ವೈದ್ಯಕೀಯ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಥೋಮಸ್ ಚಕ್ಕೊ, ವೈದ್ಯಕೀಯ ನಿರ್ದೇಶಕ ಡಾ. ವಿಮಲ್ ಕುಮಾರ್ ಗೋವಿಂದನ್ ಚರ್ಚಾ ವಿಷಯದಲ್ಲಿ ಪಾಲ್ಗೊಳ್ಳುವರು. ಹೆಚ್ಚಿನ ಮಾಹಿತಿಗಾಗಿ ಡಾ. ಸ್ಮಿತಾ ಭಟ್- 9845162167 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಅನುದಾನ ಬಿಡುಗಡೆ
ಮಂಗಳೂರು: ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರ 2012-13ನೇ ಸಾಲಿನ ಪ್ರಥಮ ಕಂತಿನ ಅನುದಾನದಲ್ಲಿ ರು. 1.75 ಲಕ್ಷ ಬಿಡುಗಡೆ ಮಾಡಲಾಗಿದೆ. ಬೈಕಂಪಾಡಿ ವಾರ್ಡಿನ ಕೋಡಿಕಲ್ ಮೊಗವೀರ ಮಹಾಸಭಾದ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಜೂರಾಗಿದ್ದ ರು. 3.50 ಲಕ್ಷದಲ್ಲಿ ರು. 1.75 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.